

ಬೆಂಗಳೂರು: ಅಂದಿನ ಕಾಲದಲ್ಲಿ ಸಹಜ ಸುಂದರಿ ಎಂದು ಕರೆಸಿಕೊಳ್ಳುತ್ತಿದ್ದ ನಟಿ ಆರತಿ ಆ ಕಾಲದ ಸ್ಟಾರ್ ನಟಿ. ಸ್ಯಾಂಡಲ್ವುಡ್ನ ಸ್ಟಾರ್ ನಟರ ಜತೆ ನಟಿಸಿದ್ದ ಈ ನಟಿ ಜೀವನದಲ್ಲಿ ಮಡೆದಿರುವ ಕೆಲವು ಘಟನೆಯಿಂದ ಸಿನಿಮಾದಿಂದ ದೂರವಾಗಿ ಮದುವೆ ಆಗಿ ಆಮೆರಿಕಾದಲ್ಲಿ ನೆಲೆಸಿದ್ದಾರೆ. ಆದರೆ ಈ ನಟಿ ಅಮೆರಿಕಾದಲ್ಲಿ ಇದ್ದರೂ ಕೋಲಾರಕ್ಕೆ ಗುಟ್ಟಾಗಿ ಬಂದು ಹೋಗುತ್ತಾರೆ ಎನ್ನುವ ಸುದ್ದಿಯೊಂದು ಇದೆ. ಈ ಕುರಿತಾದ ಸಂಪೂರ್ಣವಾದ ಮಾಹಿತಿ ತಿಳಿಯೋಣ....
ಆರತಿ ಕನ್ನಡ ಚಿತ್ರರಂಗದ ಖ್ಯಾತ ನಟಿ, ನಿರ್ದೇಶಕಿ. "ಗೆಜ್ಜೆ ಪೂಜೆ" ಚಿತ್ರದಲ್ಲಿ ನಾಯಕನ ತಂಗಿ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಂತರ ಕಾದಂಬರಿ ಆಧಾರಿತ ಚಿತ್ರಗಳಲ್ಲಿ, ಅದರಲ್ಲೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ೧೯೭೦ ಮತ್ತು ೧೯೮೦ರ ದಶಕಗಳ ಜನಪ್ರಿಯ ತಾರೆ ಎನಿಸಿದರು. ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿರುವ ಆರತಿ, ವಿಧಾನ ಪರಿಷತ್ತಿಗೂ ನಾಮನಿರ್ದೇಶನಗೊಂಡಿದ್ದರು.
ಡಾ ರಾಜ್ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್ ನಾಗ್, ಅಂಬರೀಷ್, ರಾಮಕೃಷ್ಣ ಸೇರಿದಂತೆ ಹಲವು ನಟರೊಡನೆ ಜೋಡಿಯಾಗಿ ತೆರೆಯ ಮೇಲೆ ಮಿಂಚಿದ್ದಾರೆ ಆರತಿ. ರಂಗನಾಯಕಿ, ಗೆಜ್ಜೆ ಪೂಜೆ, ಶರಪಂಜರ, ನಾಗರಹಾವು, ಕಸ್ತೂರಿ ನಿವಾಸ, ಸತಿ ಸಕ್ಕೂಬಾಯಿ, ಶುಭ ಮಂಗಳ, ಸಿನಿಮಾಗಳಲ್ಲಿ ಅಭಿನಯಿಸಿರುವ ಆರತಿಯನ್ನು ಕನ್ನಡ ಚಿತ್ರರಂಗ ಎಂದೂ ಮರೆಯಲಾಗದು. ಅಂದು ಸಾಕಷ್ಟು ವಿಚಾರವಾಗಿ ಸುದ್ದಿಯಾಗಿ ಆರತಿ ಇಂದು ಎಲ್ಲಿದ್ದಾರೆ? ಎನ್ನುವ ಪ್ರಶ್ನೆ ಆಕೆ ಅಭಿಮಾನಿಗಳಿಗೆ ಮೂಡುತ್ತದೆ. ಇದಕ್ಕೆ ಉತ್ತರ ಇಲ್ಲಿದೆ.
ಸಿನಿಮಾರಂಗಕ್ಕೆ ತಮ್ಮನ್ನು ಪರಿಚಯಿಸಿದ್ದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜತೆ ಆರತಿ ಮದುವೆಯಾದ ಬಳಿಕ ಅವರ ಸಿನಿಮಾ ಪಯಣಕ್ಕೊಂದು ಬ್ರೇಕ್ ಬಿದ್ದುಹೋಗಿತ್ತು. ಕಾಲಕಳೆದಂತೆ ಮನಸ್ತಾಪ ಬುಗಿಲೆದ್ದು ಈ ಇಬ್ಬರ ನಡುವೆ ಅಂತರ ಹೆಚ್ಚುತ್ತಾ ಹೋದಂತೆ ಆರತಿ ದಾಂಪತ್ಯ ಮುರಿದುಬಿತ್ತು. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಪ್ರವಾಸೋದ್ಯಮ ಹಾಗೂ ಶಿಕ್ಷಣ ಮಂತ್ರಿಯಾಗಿದ್ದ ಎಂ ರಘುಪತಿ ಜತೆ ಸ್ನೇಹ ಹೊಂದಿದ್ದರು. ಸ್ವಲ್ಪ ಕಾಲದಲ್ಲೇ ಪುಟ್ಟಣ್ಣ ಕಣಗಾಲ್ ತೀರಿಕೊಂಡರು. ಬಳಿಕ ಆರತಿ-ರಘುಪತಿ ಸ್ನೇಹ ಹೆಚ್ಚು ಕಾಲ ಬಾಳಲಿಲ್ಲ. ಬಳಿಕ ಆರತಿ ಚಂದ್ರಶೇಖರ್ ದೇಸಾಯ್ಗೌಡರ್ ಎಂಬವರನ್ನು ಮದುವೆಯಾಗಿ ಅಮೆರಿಕಾದಲ್ಲಿ ನೆಲೆಸಿದ್ದಾರೆ.
ಆರತಿಗೆ ಯಶಸ್ವನಿ ಎಂಬ ಮಗಳಿದ್ದಾಳೆ ಎನ್ನಲಾಗಿದ್ದು ಅವರೆಲ್ಲರೂ ಅಮೆರಿಕಾದಲ್ಲೇ ಇದ್ದಾರಂತೆ. ಆದರೆ, ಆರತಿ ಈಗ ಹೆಚ್ಚಾಗಿ ಆಧ್ಯಾತ್ಮಿಕ ನೆಲೆಯಲ್ಲಿ ಜೀವನ ಸಾಗಿಸುತ್ತಿದ್ದು, ಬದುಕಲ್ಲಿ ಶಾಂತಿ-ನೆಮ್ಮದಿ ಕಂಡುಕೊಂಡಿದ್ದಾರಂತೆ.
ಕೋಲಾರದ ಕೆಲವು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಹಲವರ ಬದುಕಿಗೆ ಆರತಿ ಆಧಾರವಾಗಿದ್ದಾರೆ ಎನ್ನಲಾಗಿದೆ. ಆದರೆ, ಸದ್ಯ ಆರತಿ ಯಾವುದೇ ಪ್ರಚಾರದಿಂದ ಬಹುದೂರವಿದ್ದು, ಸಿನಿರಂಗದವರ ಜತೆ ಅಷ್ಟಾಗಿ ಬಾಂಧವ್ಯ ಇಟ್ಟುಕೊಂಡಿಲ್ಲ ಎನ್ನಲಾಗುತ್ತಿದೆ. ಆದರೆ, ಸಮಾಜಿಕ ಸೇವೆಯಲ್ಲಿ, ದಾನಮಾಡುವಲ್ಲಿ ಆರತಿ ನಿರತರಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಆಗಾಗ ಕೋಲಾರಕ್ಕೆ ಬಮದು ಹೋಗುತ್ತಾರೆ ಎನ್ನುವ ಮಾಹಿತಿ ಇದೆ.