ಆ ಒಂದು ಘಟನೆಯಿಂದ ಈ ನಟ ಕಪ್ಪು ಬಟ್ಟೆ ಹಾಕೋದನ್ನೇ ಬಿಟ್ರು! ಕೋರ್ಟ್​ ಕೂಡ ನಿಷೇಧ ಹೇರಿತ್ತು | Black Dress

ವಿಜಯವಾಣಿ - 2025-06-01T183830.355
Published on

Black Dress: ಚಿತ್ರರಂಗದಲ್ಲಿ ಸ್ಟಾರ್ ಆಗಿ ಗುರುತಿಸಿಕೊಳ್ಳುವುದು ಬಲುಕಷ್ಟ. ಎಲ್ಲರ ಪ್ರೀತಿ, ಜನಮನ್ನಣೆ ಗಳಿಸಿದ ಮೇಲಂತೂ ಕೇಳುವುದೇ ಬೇಡ. ಸ್ಟಾರ್​ಡಮ್​ ಏನೂ? ಅಭಿಮಾನಿಗಳ ಬಳಗವೇನು? ಅಬ್ಬಬ್ಬಾ, ಆ ಅಬ್ಬರ ತಡೆಯಲು ಖಂಡಿತ ಅಸಾಧ್ಯ. ಮೊದ ಮೊದಲು ತಮ್ಮನ್ನು ಒಬ್ಬ ನಟನಾಗಿ ಯಾರಾದರೂ ಪತ್ತೆಹಚ್ಚಿ, ಮಾತನಾಡಿಸಿದ್ರೆ ಸಾಕಪ್ಪ ಎನ್ನುವ ನಟರು, ಸ್ಟಾರ್​ ಪಟ್ಟ ಸಿಕ್ಕು, ಫ್ಯಾನ್ಸ್​ಗಳು ಮುಗ್ಗಿಬೀಳಲು ಪ್ರಾರಂಭಿಸಿದರೆ, ಬೇಡಪ್ಪ ಈ ಕಷ್ಟ ಎಂದು ಹೆದರಿ, ಹೊರಗೆ ಬರಲು ಕೂಡ ಚಿಂತಿಸುತ್ತಾರೆ. ಸದ್ಯ ಇದೇ ಸಂಕಷ್ಟಕ್ಕೆ ಸಿಲುಕಿದ್ದರು ಬಾಲಿವುಡ್​ನ ಈ ಖ್ಯಾತ ನಟ.

ಚಾರ್ಮಿಂಗ್ ನಟ

ಹೌದು, ತಮ್ಮ ನಟನಾ ಕೌಶಲ್ಯ, ನೋಡಲು ಆಕರ್ಷಕ ಮೈಕಟ್ಟು, ಕಣ್ಮನ ಸೆಳೆಯುವ ಉಡುಗೆಗಳು ಅವರ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿತ್ತು. ಇವರಿಗೆ ಪುರುಷ ಫ್ಯಾನ್ಸ್​ಗಳಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಮಹಿಳಾ ಅಭಿಮಾನಿಗಳೇ ಮುಗ್ಗಿಬೀಳುತ್ತಿದ್ದರು. ತೆರೆಯ ಮೇಲೆ ಹಾಗೂ ತೆರೆ ಹಿಂದೆ ಎಲ್ಲರ ಮನಸೂರೆಗೊಳಿಸಿದ್ದ ಸ್ಟಾರ್​ ನಟ ದೇವ್​ ಆನಂದ್​, ಬಾಲಿವುಡ್​ನ ದಿಗ್ಗಜ ನಟರಲ್ಲಿ ಒಬ್ಬರಾಗಿ ಮಿಂಚಿ, ಮರೆಯಾದವರು. ಇಂದಿಗೂ ಅವರ ನೆನಪು ಬಾಲಿವುಡ್​ ಮಂದಿಯಲ್ಲಿ ಅಚ್ಚಳಿಯದಂತೆ ಉಳಿದಿದೆ.

ವೃತ್ತಿಯಲ್ಲಿ ದೊಡ್ಡ ಮಟ್ಟದ ಸಾಧನೆಗೈದ ದೇವ್​ಗೆ, ಅಭಿಮಾನಿಗಳೇ ಅವರ ಜೀವನಕ್ಕೆ ಶಾಪವೂ ಆದರು. ನಟ ಯಾವುದೇ ವೇದಿಕೆಗೆ ಹೋದರೂ ಅಲ್ಲಿಗೆ ಬರುತ್ತಿದ್ದ ಅಪಾರ ಸಂಖ್ಯೆಯ ಮಹಿಳಾ ಅಭಿಮಾನಿಗಳು ಅವರನ್ನು ನೋಡಲು ಇತರರೊಂದಿಗೆ ಜಗಳ ಮಾಡಿ, ನೂಕುನುಗ್ಗಲಿನಲ್ಲಿ ಸೇರುತ್ತಿದ್ದರು. ಕಿಕ್ಕಿರಿದು ಬರುತ್ತಿದ್ದ ಫ್ಯಾನ್ಸ್​ಗಳ ಮಧ್ಯೆ ಜೀವಕ್ಕೆ ಅಪಾಯ ಎದುರಾಗುತ್ತದೆ ಎಂದು ತಿಳಿದರೂ ಸಹ ತಮ್ಮ ಪ್ರಾಣದ ಹಂಗು ತೊರೆದು, ಎತ್ತರದ ಕಟ್ಟಡಗಳನ್ನು ಹತ್ತಿ, ತಮ್ಮ ನೆಚ್ಚಿನ ನಟನನ್ನು ನೋಡುತ್ತಿದ್ದರು. ಇದೇ ನಟನಿಗೆ ಶಾಪವಾಗಿ ತಿರುಗಿತು.

ಕಪ್ಪು ಬಣ್ಣವೇ ಶಾಪವಾಯ್ತು

ಹೆಚ್ಚಾಗಿ ಕಪ್ಪು​ ಬಣ್ಣದ ಸೂಟ್​, ಕೋಟ್​ನಲ್ಲಿ ಕಂಗೊಳಿಸುತ್ತಿದ್ದ ನಟ, ಅಭಿಮಾನಿಗಳ ಮುಂದೆ ಇದೇ ಕಲರ್​ನ ಡ್ರೆಸ್​ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರು. ಇದು ಮಹಿಳಾ ಫ್ಯಾನ್ಸ್​ಗಳನ್ನು ಹೆಚ್ಚು ಸೆಳೆಯುತ್ತಿದ್ದ ಕಾರಣ, ಅಭಿಮಾನಿಯೊಬ್ಬರು ದೆಹಲಿಯಲ್ಲಿರುವ ಕುತುಬ್​ ಮಿನಾರ್​ನಿಂದ ಜಿಗಿದು ದುರಂತ ಅಂತ್ಯ ಕಂಡರು. ಇದೊಂದು ಘಟನೆ ನಟನ ಜೀವನದಲ್ಲಿ ಕಪ್ಪು ಚುಕ್ಕೆ ಆಗಿ ತಿರುಗಿದ್ದು, ನೀವು ಇನ್ಮುಂದೆ ಕಪ್ಪು ಬಣ್ಣದ ಉಡುಗೆಯನ್ನು ಧರಿಸುವಂತಿಲ್ಲ ಎಂದು ​ದೇವ್​ ಆನಂದ್​ಗೆ ಬಾಂಬೆ ಹೈಕೋರ್ಟ್ ನಿಷೇಧ ಹೇರಿತ್ತು.

ಇಷ್ಟಾದರೂ ಸಹ ದೇವ್​ ಮೇಲಿನ ಪ್ರೀತಿ, ಅಭಿಮಾನ, ಅವರ ಸಿನಿಮಾ ಮೇಲಿನ ಉತ್ಸಾಹ ಎಂದಿಗೂ ಕಡಿಮೆ ಆಗಿರಲಿಲ್ಲ. ನಟನ ಚಿತ್ರಕ್ಕಾಗಿ ಅಭಿಮಾನಿಗಳು ಬಹಳ ಕಾತರದಿಂದ ಚಿತ್ರಮಂದಿರಗಳತ್ತ ಎದುರುನೋಡುತ್ತಿದ್ದರು. ಡಿಸೆಂಬರ್ 03, 2011ರಲ್ಲಿ ದೇವ್, ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಕುಟುಂಬಸ್ಥರನ್ನು ಬಿಟ್ಟು ಇಹಲೋಕ ತ್ಯಜಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net