

Actor Vishal : ಕಾಲಿವುಡ್ ಸೂಪರ್ಸ್ಟಾರ್ ವಿಶಾಲ್ ಅವರು ತಮಿಳುನಾಡು ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ತಮ್ಮ ಸಿನಿ ಮಾರ್ಕೆಟ್ ವಿಸ್ತರಿಸಿಕೊಂಡಿದ್ದಾರೆ. ಅವರ ಅನೇಕ ಚಿತ್ರಗಳು ಬಾಲಿವುಡ್ಗೆ ಡಬ್ ಆಗಿವೆ. ಸಿನಿಮಾ ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲೂ ವಿಶಾಲ್ ಗುರುತಿಸಿಕೊಂಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ಇನ್ನೂ ಮದುವೆಯಾಗದ ಕೆಲವು ನಟರಲ್ಲಿ ವಿಶಾಲ್ ಕೂಡ ಒಬ್ಬರು. ವಯಸ್ಸು 48 ಆದರೂ ಇನ್ನು ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. ಆದರೆ, ಏಕಾಂಗಿ ಜೀವನಕ್ಕೆ ಇದೀಗ ವಿದಾಯ ಹೇಳುವ ಸಮಯ ಬಂದಿದೆ. ಕೊನೆಗೂ ವಿಶಾಲ್ ಅವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ಹೌದು, ನಟಿ ಸಾಯಿ ಧನ್ಸಿಕಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಚೆನ್ನೈನಲ್ಲಿ ಈ ಸಮಾರಂಭ ಸರಳವಾಗಿ ನಡೆದಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಹೊಸ ಜೋಡಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸೇರಿದಂತೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿಶಾಲ್ ಅವರು 48ನೇ ವಯಸ್ಸಿಗೆ ಕಾಲಿಟ್ಟರು.
ವಿಶಾಲ್ ಅವರು ಧನ್ಸಿಕಾರನ್ನು ತುಂಬಾ ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವರ್ಷ ಮೇ ತಿಂಗಳಲ್ಲಿ ನಡೆದ ಯೋಗಿ ಡಾ ಚಿತ್ರದ ಸಮಾರಂಭದಲ್ಲಿ ತಮ್ಮ ಪ್ರೇಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದರು. ಆಗಸ್ಟ್ 29 ರಂದು ಮದುವೆಯಾಗುವುದಾಗಿ ಇಬ್ಬರು ಘೋಷಣೆ ಮಾಡಿದ್ದರು. ಆದರೆ, ಕಲಾವಿದ ಸಂಘದ ಕಾರ್ಯದರ್ಶಿಯಾಗಿರುವ ವಿಶಾಲ್, ಕಲಾವಿದರ ಸಂಘದ ಕಟ್ಟಡದ ಉದ್ಘಾಟನೆಯ ನಂತರ ಮದುವೆಯಾಗುವುದಾಗಿ ಹೇಳಿದರು. ಆದರೆ, ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮದುವೆ ಸಮಾರಂಭವೂ ಶೀಘ್ರದಲ್ಲೇ ನಡೆಯುವ ಸಾಧ್ಯತೆ ಇದೆ.
ಅಂದಹಾಗೆ, ನಟ ವಿಶಾಲ್ 2004ರಲ್ಲಿ ಬಿಡುಗಡೆಯಾದ “ಸೆಲ್ಲಮೆ” ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರ ವಿಶಾಲ್ ಅವರ ಚಲನಚಿತ್ರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲು ಚಿತ್ರವಾಯಿತು. ಇದರ ನಂತರ ಲಿಂಗುಸ್ವಾಮಿ ನಿರ್ದೇಶನದ ಸಂಡಕೋಳಿ ಚಿತ್ರ ಬಿಡುಗಡೆಯಾಯಿತು, ಇದು ಅವರ ವೃತ್ತಿಜೀವನದ ಅತಿ ದೊಡ್ಡ ಹಿಟ್ ಆಯಿತು. ಈ ಎರಡು ಚಿತ್ರಗಳ ಯಶಸ್ಸಿನ ನಂತರ ವಿಶಾಲ್ ಅವರು ತಿಮಿರು, ತಾಮಿರಬರಣಿ, ತೀರದ ವಿಲೈಯತ್ತು ಪಿಳ್ಳೈ, ಅವನ್ ಇವನ್, ಪಾಂಡಿಯ ನಾಡು, ಪೂಜಾ, ಮರುದು ಮತ್ತು ತುಪ್ಪರಿವಾಲನ್ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ನಟನಿಂದ ನಿರ್ಮಾಪಕನಾಗಿ ಬದಲಾಗಿದ್ದ ವಿಶಾಲ್, ಇದೀಗ ತುಪ್ಪರಿವಾಲನ್ 2 ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.
ಇನ್ನು ಸಾಯಿ ಧನ್ಸಿಕಾ ಅವರು ತಮಿಳುನಾಡಿನ ತಂಜಾವೂರಿನ ಹುಡುಗಿ. 2006 ರಲ್ಲಿ 'ಮನತೋಡು ಮಜೈಕಾಲಂ' ಎಂಬ ತಮಿಳು ಚಿತ್ರದ ಮೂಲಕ ನಟಿಯಾದರು. ಆರಂಭದಲ್ಲಿ ಮರೀನಾ ಎಂಬ ಹೆಸರಿನೊಂದಿಗೆ ಪ್ರೇಕ್ಷಕರಿಗೆ ಪರಿಚಯವಾದರು. ಬಳಿಕ 2009 ರಲ್ಲಿ, ತನುಷಿಕಾ ಎಂಬ ಹೆಸರಿನಲ್ಲಿ 'ಕೆಂಪಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ, ಅವರು ಸಾಯಿ ಧನ್ಸಿಕಾ ಹೆಸರಿನಲ್ಲಿ ಸಿನಿಮಾ ಮಾಡುವುದನ್ನು ಮುಂದುವರೆಸಿದರು. 'ಕಬಾಲಿ' ಚಿತ್ರದಲ್ಲಿ ರಜನಿಕಾಂತ್ ಅವರ ಮಗಳಾಗಿ ನಟಿಸುವ ಮೂಲಕ ಜನಮನ್ನಣೆ ಗಳಿಸಿದರು.
ವಿಶಾಲ್ ಮತ್ತು ಧನ್ಸಿಕಾ ಇಲ್ಲಿಯವರೆಗೆ ಒಂದೇ ಒಂದು ಚಿತ್ರದಲ್ಲಿ ಒಟ್ಟಿಗೆ ನಟಿಸಿಲ್ಲ. ಆದರೆ, ಧನ್ಸಿಕಾ ಅವರು ವಿಶಾಲ್ ಅವರನ್ನು 15 ವರ್ಷಗಳಿಂದ ತಿಳಿದಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನಾವು ಸ್ನೇಹಿತರಾಗಿದ್ದೇವೆ ಮತ್ತು ಕೆಲವು ವರ್ಷಗಳ ಹಿಂದೆ ನಮ್ಮ ನಡುವೆ ಪ್ರೀತಿ ಅರಳಿದೆ ಎಂದು ಈ ಹಿಂದೆ ಹೇಳಿದ್ದರು. ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ತಮ್ಮ ಮದುವೆ ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ. (ಏಜೆನ್ಸೀಸ್)