

ಬೆಂಗಳೂರು: ಶಂಕರ್ ನಿರ್ದೇಶನದ, ರಾಮ್ ಚರಣ್ ತೇಜ ಅಭಿನಯದ ಹೊಸ ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಕಳೆದ ವಾರದ ಸುದ್ದಿ. ಈ ವಾರ, ಸುದೀಪ್ ವಿಷಯವಾಗಿ ಇನ್ನೊಂದು ಹೊಸ ಸುದ್ದಿ ಬಂದಿದೆ. ಅದೇನೆಂದರೆ, ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರದಲ್ಲಿ ಸುದೀಪ್ ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಹಾಗೊಂದು ಸುದ್ದಿ ಕೆಲವು ವೆಬ್ಸೈಟ್ಗಳಲ್ಲಿ ಹರಿದಾಡುತ್ತಿದೆ. ‘ಆದಿಪುರುಷ್’ ಘೊಷಣೆಯಾದ ದಿನದಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ರಾಮಾಯಣ ಆಧರಿಸಿದ ಈ ಚಿತ್ರದಲ್ಲಿ ರಾಮನಾಗಿ ಪ್ರಭಾಸ್ ನಟಿಸುತ್ತಿದ್ದಾರೆ ಎಂದು ಮೊದಲು ಸುದ್ದಿಯಾಯಿತು. ರಾವಣನಾಗಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳುತ್ತಿರುವುದು ಇನ್ನಷ್ಟು ಪ್ರಚಾರ ಪಡೆಯಿತು.
ಸೀತಾ ಪಾತ್ರಕ್ಕೆ ಯಾರು ಆಯ್ಕೆಯಾಗಬಹುದು ಎಂಬ ವಿಷಯ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿ, ಕೊನೆಗೆ ಆ ಪಾತ್ರಕ್ಕೆ ಕೃತಿ ಸನೋನ್ ಅವರ ಹೆಸರು ಅಂತಿಮವಾಯಿತು. ಇದೀಗ ಸುದೀಪ್ ಸಹ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ರಾವಣನ ತಮ್ಮ ವಿಭಿಷಣನ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಲಾಗಿದ್ದು, ಒಂದು ಪಕ್ಷ ಅವರು ಒಪ್ಪಿದರೆ, ಚಿತ್ರದಲ್ಲಿ ಸೈಫ್ ಅಲಿ ಖಾನ್ ಸಹೋದರನಾಗಿ ಕಾಣಿಸಿಕೊಳ್ಳಲಿದ್ದಾರೆ.