

ಉಡುಪಿ: ಕನ್ನಡ ಚಲನಚಿತ್ರರಂಗದ ಹಾಸ್ಯನಟ, ಹಿರಿಯ ರಂಗಕರ್ಮಿ ರಾಜು ತಾಳಿಕೋಟೆ ಅವರು ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಕನ್ನಡದ ಹಲವು ಸಿನಿಮಾಗಳಲ್ಲಿ ಹಾಸ್ಯ ಕಲಾವಿದರಾಗಿ ನಟಿಸಿರುವ ರಾಜು ತಾಳಿಕೋಟೆ, ಬಿಗ್ ಬಾಸ್ ಸೀಸನ್ 7ರ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ನಿನ್ನೆ (ಅ.12) ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ 5:30ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ಮಾಹಿತಿ ಹಂಚಿಕೊಂಡಿವೆ.
ಉಡುಪಿಯಲ್ಲಿ ನಟ ಶೈನ್ ಶೆಟ್ಟಿ ಅವರ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ಗಾಗಿ ತೆರಳಿದ್ದ ರಾಜು ತಾಳಿಕೋಟೆ, ನಿನ್ನೆ ಸಂಜೆ 6 ಗಂಟೆಯ ನಂತರ ಚಿತ್ರೀಕರಣ ಮುಗಿಸಿ ರೂಮ್ಗೆ ಹಿಂತಿರುಗಿದ್ದರು. ತಡರಾತ್ರಿ ಹೃದಯಾಘಾತ ಸಂಭವಿಸಿದ್ದು, ತಕ್ಷಣವೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ನೀಡಿದ ಚಿಕಿತ್ಸೆಗೆ ಸ್ಪಂದಿಸದ ರಾಜು ತಾಳಿಕೋಟೆ ಇಂದು ಸಂಜೆ ಇಹಲೋಕ ತ್ಯಜಿಸಿದರು.
ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆಯ ರಾಜು, ತಮ್ಮ ಹಾಸ್ಯಕ್ಕೆ ಹೆಚ್ಚು ಜನಪ್ರಿಯತೆ ಗಳಿಸಿದವರು. ನಾಟಕಗಳಲ್ಲಿ ಜನರನ್ನು ನಕ್ಕು ನಗಿಸುತ್ತಿದ್ದ ಹಿರಿಯ ರಂಗಕರ್ಮಿ, ಉತ್ತರ ಕರ್ನಾಟಕ ಮಂದಿಯನ್ನು ನಗೆಯ ಅಲೆಯಲ್ಲಿ ತೇಲಿಸಿದ್ದರು. ಇಂದು ತಮ್ಮ ಕುಟುಂಬಸ್ಥರು, ಅಭಿಮಾನಿಗಳು ಮತ್ತು ಪ್ರೀತಿ-ಪಾತ್ರರನ್ನು ಅಗಲಿದ ರಾಜು ತಾಳಿಕೋಟೆ ನಿಧನದ ಸುದ್ದಿ ತಿಳಿದು ವಿಜಯಪುರ ರಂಗಭೂಮಿ ಮತ್ತು ಕನ್ನಡ ಚಿತ್ರರಂಗದ ಕಲಾವಿದರು ಕಂಬನಿ ಮಿಡಿದಿದ್ದಾರೆ.