

ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ರಾಜಕೀಯ ಪಕ್ಷದ ಭವಿಷ್ಯ ನಿರ್ಧಾರವಾಗಿದ್ದು, ಪಕ್ಷ ಕಟ್ಟುವ ಕೆಲಸ ಈಗಲ್ದೇ ಹೋದರೆ ಇನ್ಯಾವತ್ತೂ ಸಾಧ್ಯವಾಗಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಈ ಸಂಬಂಧ ಗುರುವಾರ ಟ್ವೀಟ್ ಮಾಡಿದ ಅವರು, ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ತಮಿಳು ಭಾಷೆಯಲ್ಲಿರುವ ಟ್ವೀಟ್ ಮಾಡಿರುವ ಅವರು, ರಾಜಕೀಯ ಪಕ್ಷವನ್ನು ಜನವರಿ ತಿಂಗಳಲ್ಲಿ ಸ್ಥಾಪಿಸುತ್ತೇವೆ. ಇದಕ್ಕೆ ಸಂಬಂಧಿಸಿ ಘೋಷಣೆಯನ್ನು ಡಿಸೆಂಬರ್ 31ರಂದು ಮಾಡುವುದಾಗಿ ತಿಳಿಸಿದ್ದಾರೆ. ಪ್ರತಿಯೊಂದನ್ನೂ ನಾವು ಬದಲಾಯಿಸೋಣ. ಸದ್ಯ ಎದುರಾಗಿರುವ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ತೇವೆ. ನಾವು ಪ್ರಾಮಾಣಿಕ, ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಅಧ್ಯಾತ್ಮಿಕ ರಾಜಕಾರಣವನ್ನು ಮಾಡುತ್ತೇವೆ ಎಂದು ಪಕ್ಷದ ಧ್ಯೇಯೋದ್ದೇಶವನ್ನೂ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ 2021ರ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಕಳೆದ ತಿಂಗಳಷ್ಟೇ ರಜಿನಿಕಾಂತ್ ತಾವು 2016ರಲ್ಲಿ ಕಿಡ್ನಿ ಕಸಿ ಮಾಡಿಸಿದ ವಿಚಾರ ಬಹಿರಂಗಪಡಿಸಿದ್ದರು. ವೈದ್ಯರ ಸಲಹೆ ಮೇರೆಗೆ ರಾಜಕೀಯ ಚಟುವಟಿಕೆ ವಿಳಂಬ ಮಾಡಿದ್ದಾಗಿ ಇತ್ತೀಚೆಗೆ ಹೇಳಿದ್ದರು.