ಲಾಕ್‌ಡೌನ್‌ನಿಂದಾಗಿ 26 ದಿನಗಳಿಂದ ಮೈಸೂರಲ್ಲೇ ಇದ್ದ ನಟಿ ಭಾರತಿ ವಿಷ್ಣುವರ್ಧನ್ ಬೆಂಗಳೂರಿಗೆ ವಾಪಸ್

Bharathi Vishnuvardhan
Published on

ಮೈಸೂರು: ಲಾಕ್‌ಡೌನ್‌ನಿಂದ ಮೈಸೂರಿನಲ್ಲೇ ಉಳಿದುಕೊಂಡಿದ್ದ ಹಿರಿಯ ನಟಿ ಡಾ. ಭಾರತಿ ವಿಷ್ಣುವರ್ಧನ್ ಅವರನ್ನು ಜಿಲ್ಲಾಡಳಿತ ಗುರುವಾರ ಬೆಂಗಳೂರಿಗೆ ಕಳುಹಿಸಿಕೊಟ್ಟಿದೆ.

ಕರೊನಾ ಸೋಂಕು ತಡೆಯುವ ಸಲುವಾಗಿ ಜಾರಿ ಮಾಡಲಾದ ಲಾಕ್‌ಡೌನ್‌ಗೂ ಮೊದಲೇ ಅವರು ಮೈಸೂರಿಗೆ ಆಗಮಿಸಿದ್ದರು. ಬಳಿಕ ಅಂತರ ಜಿಲ್ಲಾ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದರಿಂದ ಇವರು ಬೆಂಗಳೂರಿಗೆ ಮರಳಲು ಸಾಧ್ಯವಾಗಿರಲಿಲ್ಲ. ವಾಹನವನ್ನು ಬೆಂಗಳೂರಲ್ಲೇ ಬಿಟ್ಟು ಬಂದಿದ್ದರಿಂದ ವಾಪಸ್ ಹೋಗಲು ಕಷ್ಟಕರವಾಗಿತ್ತು.

ಮೂರು ವಾರಗಳ ಕಾಲ ವಿಜಯನಗರದಲ್ಲಿರುವ ಮನೆಯಲ್ಲೇ ಉಳಿದುಕೊಂಡಿದ್ದರಿಂದ ಅವರ ಬಳಿ ಇದ್ದ ಅಗತ್ಯ ಔಷಧಗಳು ಖಾಲಿಯಾಗಿದ್ದವು. ಈ ವಿಷಯವನ್ನು ಅವರು ಬುಧವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಗಮನಕ್ಕೆ ತಂದರು. ಮಾನವೀಯತೆಯ ದೃಷ್ಟಿಯಿಂದ ತಕ್ಷಣವೇ ಜಿಲ್ಲಾಡಳಿತದೊಂದಿಗೆ ಮಾತನಾಡಿದ ಸಚಿವರು, ಅಗತ್ಯ ಪಾಸ್, ವಾಹನ ವ್ಯವಸ್ಥೆ ಮಾಡಿಕೊಟ್ಟರು. ಈ ನೆರವಿನಿಂದ 26 ದಿನಗಳ ಬಳಿಕ ಬೆಂಗಳೂರಿಗೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net