

ಬೆಂಗಳೂರು: ಥಾಯ್ಲೆಂಡ್‌ನಲ್ಲಿ ಇತ್ತೀಚೆಗೆ ನಡೆದ ಮುವಾಯ್ಥಾಯ್ ಸೆಣಸಾಟದಲ್ಲಿ ಕನ್ನಡಿಗ ಸೂರ್ಯ ಸಾಗರ್ ಶೌರ್ಯ ಮೆರೆದಿದ್ದಲ್ಲದೆ ಪದಕವನ್ನೂ ಗಳಿಸಿದ್ದಾರೆ. ಪ್ರಪಂಚದ ಪ್ರಥಮ ಮುವಾಯ್ಥಾಯ್ ಸ್ಟೇಡಿಯಂ ಎನ್ನಲಾದ ರಾಜದಮ್ನರ್ನ್ ಸ್ಟೇಡಿಯಮ್ನಲ್ಲಿ ಇವರು ಈ ಸಾಧನೆ ಮಾಡಿದ್ದಾರೆ.
ಇತ್ತೀಚೆಗೆ ಥಾಯ್ಲೆಂಡ್‌ನಲ್ಲಿ ನಡೆದ ರಾಜದಮ್ನರ್ನ್ ವರ್ಲ್ಡ್ ಸೀರಿಸ್(ಆರ್ಡಬ್ಲ್ಯುಎಸ್)ನಲ್ಲಿ ಸೂರ್ಯ ಅಲ್ಲಿನ ಖ್ಯಾತ ಪ್ರತಿಸ್ಪರ್ಧಿ ಚಟಪೆಚ್ ಸಪಿದ ಅವರನ್ನು ಮಣಿಸಿ ಪದಕ ಗಳಿಸಿದ್ದಾರೆ. ಮುವಾಯ್ಥಾಯ್ನ ನೂರಾರು ಸೆಣಸಾಟಗಳಲ್ಲಿ ಭಾಗವಹಿಸಿ, 4 ಬಾರಿ ಟೂರ್ನಮೆಂಟ್ ಚಾಂಪಿಯನ್ ಆಗಿರುವ ಸಪಿದ ಅವರನ್ನು ಮಣಿಸುವ ಮೂಲಕ ಸೂರ್ಯ ಶೌರ್ಯ ಮೆರೆದಿದ್ದಾರೆ. ಸೂರ್ಯ ಈ ಹೆಗ್ಗಳಿಕೆಗೆ ಪಾತ್ರರಾದ ಮೊದಲ ಭಾರತೀಯ ಮುವಾಯ್ಥಾಯ್ ಫೈಟರ್ ಎಂದೆನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಚೊಚ್ಚಲ ಸೆಣಸಾಟದಲ್ಲಿ ಸೂರ್ಯ ಥಾಯ್ಲೆಂಡ್ನ ದೆನ್ ನೊಂಗ್ ಬುವಾ ಅವರನ್ನು ಡೆಡ್ಲಿ ಎಲ್ಬೊ ಕೆಒನಲ್ಲಿ ಮಣಿಸಿದ್ದರು.
ಆರ್ಡಬ್ಲ್ಯುಎಸ್ನಲ್ಲಿ ಹೀಗೊಂದು ಸಾಧನೆ ಮಾಡಿರುವ ಕನ್ನಡಿಗ ಬೇರಾರೂ ಅಲ್ಲ. ನಟ ಅರುಣ್ ಸಾಗರ್ ಅವರ ಪುತ್ರ ಸೂರ್ಯ ಸಾಗರ್. ಅರುಣ್ ಸಾಗರ್ ಪುತ್ರ ಥಾಯ್ಲೆಂಡ್‌ನಲ್ಲಿ ಮುವಾಯ್ಥಾಯ್ನಲ್ಲಿ ಮಿಂಚಿದರೆ, ಇತ್ತ ಪುತ್ರಿ ಅದಿತಿ ಸಾಗರ್ ಬೆಳ್ಳಿತೆರೆ ಮೇಲೆ ಮಿಂಚಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ, ಶಿವರಾಜಕುಮಾರ್ ಅಭಿನಯದ 'ವೇದ' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶಿಸಿದ್ದರು.