

ಸವದತ್ತಿ: ಸರ್ಕಾರಿ ಸಭೆ, ಕಾರ್ಯಕ್ರಮಗಳಿಗೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಗೈರಾದವರಿಗೆ ನೋಟಿಸ್ ನೀಡಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅ.7 ರಂದು ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿಯಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಅಂದು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ, ವಿಶೇಷ ಉಪನ್ಯಾಸ ಕಾರ್ಯಕ್ರಮ, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.
ವಾಲ್ಮೀಕಿ ಭವನದ ಅಪೂರ್ಣ ಕಾಮಗಾರಿ ಕುರಿತು ಭೂಸೇನೆ ಅಧಿಕಾರಿ ಎಚ್.ಎ.ಕದ್ರಾಪುರಕರ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಭವನದ ಕಾಂಪೌಂಡ್, ಶೌಚಗೃಹ ಸೇರಿ ವಿವಿಧ ಕೆಲಸ ಬಾಕಿ ಉಳಿದಿದ್ದು, ಶ್ರೀ ಪೂರ್ಣಗೊಳಿಸಬೇಕು ಎಂದರು. ಸಮಯದಾಯದ ಮುಖಂಡರಾದ ರಾವೇಂದ್ರ ಪೂಜೇರ, ಜಗದೀಶ ಶಿರಸಂಗಿ ಮಾತನಾಡಿದರು.
ಸಭಿಕರ ಆಕ್ರೋಶ: ಸಭೆಯಲ್ಲಿ ಬೆರಳೆಣಿಕೆಯಷ್ಟು ಅಧಿಕಾರಿಗಳಿರುವುದು ಸರಿಯಲ್ಲ. ಸರ್ಕಾರಿ ಸಭೆಯಲ್ಲಿ ಅಧಿಕಾರಿಗಳು ಗೈರಾದಲ್ಲಿ ಜನರಿಗೆ ಮಾಹಿತಿ ನೀಡುವವರಾರು, ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕೆಂದು ಸಭಿಕರು ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ತಾಪಂ ಇಒ ಆನಂದ ಬಡಕುಂದ್ರಿ, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಸಮಾಜ ಕಲ್ಯಾಣಾಧಿಕಾರಿ ಆರ್.ಆರ್.ಕುಲಕರ್ಣಿ, ಎಇಇ ಬಸವರಾಜ ಅಯ್ಯನಗೌಡರ, ಪುರಸಭೆ ಸದಸ್ಯ ದ್ಯಾಮಣ್ಣ ಸುತಗಟ್ಟಿ, ಬಸವರಾಜ ತಳವಾರ ಇತರರಿದ್ದರು.