

ಕುಂದಾಪುರ: ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಗುರುವಾರ ಬೆಳ್ಳಂಬೆಳಗ್ಗೆ ಕುಂದಾಪುರ ತಾಲೂಕಿನ ಬಹುತೇಕ ಕಡೆ ತಪಾಸಣೆಗಿಳಿದ ಪೊಲೀಸರು ಶಾಲಾ ವಾಹನ ಹಾಗೂ ಆಟೋ ಮತ್ತಿತರ ವಾಹನಗಳನ್ನು ತಪಾಸಣೆ ನಡೆಸಿದರು.
ತಾಲೂಕಿನ ವಿವಿಧ ಖಾಸಗಿ ಶಾಲೆಗಳು ಶಾಲಾ ವಾಹನಗಳಲ್ಲಿ ಹಾಗೂ ಆಟೋ ರಿಕ್ಷಾ ಮತ್ತಿತರ ವಾಹನಗಳಲ್ಲಿ ಮಿತಿಮೀರಿ ವಿದ್ಯಾರ್ಥಿಗಳನ್ನು ತುಂಬಿಸುತ್ತಿರುವ ಹಾಗೂ ಅತಿ ವೇಗದಿಂದ ಸಂಚರಿಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳ ತಪಾಸಣೆ ಕೈಗೊಂಡರು.
ವಾಹನಗಳ ದಾಖಲೆ ಹಾಗೂ ಚಾಲಕರ ಚಾಲನಾ ಪರವಾನಗಿ, ಬ್ಯಾಡ್ಜ್ ಹೊಂದಿರುವ ಬಗ್ಗೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿದ ಪೊಲೀಸರು, ದಾಖಲೆ ಸರಿ ಇಲ್ಲದ ವಾಹನಗಳಿಗೆ ಎಚ್ಚರಿಕೆ ನೀಡಿ ದಾಖಲೆಗಳನ್ನು ಸರಿಪಡಿಸುವಂತೆ ಸೂಚಿಸಿದರು.
ಆಟೋಗಳಲ್ಲಿ ಮಿತಿಮೀರಿ ಮತ್ತು ಅಪಾಯಕಾರಿಯಾಗಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಮುಂದೆ ನಿಯಮಗಳನ್ನು ಉಲ್ಲಂಘಿಸಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು, ಪ್ರಯಾಣಿಕರನ್ನು ಕರೆದುಕೊಂಡು ಹೋದರೆ ಅಂಥ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾವುಗುದು ಎಂದು ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.