ಆದಿವಾಸಿಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮಕ್ಕೆ ಕ್ರಮ

CM Dance
ಕೆರೆ ಹಾಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದ ವೇಳೆ ಸ್ಥಳೀಯ ಆದಿವಾಸಿ ಜನಾಂಗದವರು ಸಾಂಪ್ರದಾಯಿಕ ದಿರಿಸಿನೊಂದಿಗೆ ನೃತ್ಯ ಮಾಡಿ ಸ್ವಾಗತಿಸಿದರು.
Published on

ಎಚ್.ಡಿ. ಕೋಟೆ: ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಮಾಡಲು ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ತಾಲೂಕಿನ ಕೆರೆಹಾಡಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಡಿ ಜನರೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ಎಸ್.ಟಿ. ಮೀಸಲಾತಿಯಲ್ಲಿ ಆದಿವಾಸಿಗಳಿಗೆ ಒಳಮೀಸಲಾತಿ ನೀಡಲು ಯಾವುದೇ ಅವಕಾಶ ಇಲ್ಲ. ಮುಂದಿನ ದಿನಗಳಲ್ಲಿ ಸಮಿತಿ ರಚಿಸಿ ಅಧ್ಯಯನ ನಡೆಸಿ ಒಳ ಮೀಸಲಾತಿಗೆ ಕೇಂದ್ರಕ್ಕೆ ಶಿಫಾರಸು ಮಾಡಿಸಲಾಗುವುದು ಎಂದರು.

ವನ್ಯಜೀವಿಯ ಕಾನೂನನ್ನು ಅಧ್ಯಯನ ಮಾಡಿ ಆದಿವಾಸಿಗಳಿಗೆ ಯಾವ ರೀತಿಯ ಸೌಲಭ್ಯವನ್ನು ಒದಗಿಸಬಹುದು ಎಂಬುದರ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಒಬ್ಬ ಉನ್ನತ ಅಧಿಕಾರಿ ನೇಮಿಸಲಾಗುವುದು ಎಂದರು.

ಕುಡಿಯುವ ನೀರಿಗೆ ಮತ್ತು ವಾಸಿಸಲು ಮನೆ ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆ ಹಾಡಿ ಜನರಿಗೆ ಯಾವುದೇ ತೊಂದರೆ ಮಾಡಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಅರಣ್ಯಕ್ಕೆ ಸಂಬಂಧಿಸಿದ ಕಾನೂನಿಗೆ ಅನುಗುಣವಾಗಿ ಕುಡಿಯುವ ನೀರಿಗೆ ಮತ್ತು ಮನೆ ನಿರ್ಮಿಸಲಿಕ್ಕೆ ಅನುವು ಮಾಡಲಾಗುವುದು ಎಂದರು.

ಕೆರೆಹಾಡಿಯ ರವಿ ಹಾಡಿಯಲ್ಲಿ ಕುಡಿಯುವ ನೀರು ಮತ್ತು ಮನೆಗಳನ್ನು ಕಟ್ಟಲು ನಮಗೆ ಅವಕಾಶ ಕಲ್ಪಿಸುತ್ತಿಲ್ಲ ಎಂದು ಹಾಡಿ ಜನರು ಅಳಲನ್ನು ತೋಡಿಕೊಂಡಾಗ ಮೇಲಿನಂತೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.

ಮಾಳದಹಾಡಿಯ ಸೋಮೇಶ್ ಮಾತನಾಡಿ, ಹಾಡಿಯಲ್ಲಿ ನಾವು ಮೂರ‌್ನಾಲ್ಕು ಎಕರೆಯಲ್ಲಿ ವ್ಯವಸಾಯ ಮಾಡುತ್ತಾ ಅನುಭವದಲ್ಲಿ ಇದ್ದೇವೆ. ಆದರೆ ನಮಗೆ ಒಂದು ಗುಂಟೆ, ಎರಡು ಗುಂಟೆ ಜಾಗಕ್ಕೆ ಹಕ್ಕುಪತ್ರ ಮಾತ್ರ ನೀಡಿದ್ದಾರೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಈ ಬಗ್ಗೆ ವನ್ಯಜೀವಿ ಮಂಡಳಿಯ ಸಭೆಯನ್ನು ಕರೆದು ಚರ್ಚಿಸಲಾಗುವುದು ಎಂದರು.

ಆದಿವಾಸಿ ಮುಖಂಡ ಕಾಳ ಕಲ್ಕರ್ ಮಾತನಾಡಿ, ಪ್ರೊ.ಅಸ್ಸಾದಿ ಅವರ 34 ಶಿಫಾರಸುಗಳ ವರದಿಯನ್ನು ಸಚಿವ ಸಂಪುಟ ನಡೆಸಿ ಅನುಷ್ಠಾನಗೊಳಿಸಬೇಕು. ರಾಜ್ಯದ ಪಶ್ಚಿಮ ಘಟ್ಟದ ವ್ಯಾಪ್ತಿಗೆ ಬರುವ 42 ತಾಲೂಕುಗಳಿಂದ 1500 ಬುಡಕಟ್ಟು ಆದಿವಾಸಿ ವಾಸಸ್ಥಳಗಳಲ್ಲಿ 70 ಸಾವಿರಕ್ಕೂ ಹೆಚ್ಚಿನ ಆದಿವಾಸಿ ಕುಟುಂಬಗಳು ನೆಲೆಸಿವೆ. ಸಮುದಾಯಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ, ಆರೋಗ್ಯ, ವಸತಿ ಮತ್ತು ಮೂಲ ಸೌಕರ್ಯಗಳು ಸರಿಯಾಗಿ ದೊರೆಯುತ್ತಿಲ್ಲ. ನಾವು ಸಾಗುವಳಿ ಹೊಂದಿರುವ ಭೂಮಿಗೆ ಪಕ್ಕಾ ಪೋಡು ಮಾಡಿಸಬೇಕು. ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗದ ಅಸಮಾನತೆಯ ಪ್ರಾತಿನಿಧ್ಯ ಇರುವುದರಿಂದ ರಾಜ್ಯದ ಬಜೆಟ್ ಅನುದಾನದ ಜತೆಗೆ ಮತ್ತು ಮುಖ್ಯಮಂತ್ರಿ ನಿಧಿಯಿಂದ ಆದಿವಾಸಿಗಳು ನೆಲೆಸಿರುವ ಹಾಡಿಯನ್ನು ಮಾದರಿ ಹಾಡಿಯನ್ನಾಗಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, 2020ರಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಹಣ ಬಿಡುಗಡೆಯಾಗಿತ್ತು. ಆದರೆ ಇಲ್ಲಿ ಅರಣ್ಯ ಇಲಾಖೆಯ ಕಾನೂನಿನ ತೊಡಕಿನಿಂದಾಗಿ ಅದು ವಾಪಸಾಗಿದೆ. ಅಲ್ಲದೆ 16 ಅಂಗನವಾಡಿ ಮಂಜೂರಾದರೂ ಅರಣ್ಯ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎಂದರು.

ಆದಿವಾಸಿಗಳಿಗೆ ನಿಗಮ ಅವಶ್ಯಕತೆ ಇರುವುದರಿಂದ ಬುಡಕಟ್ಟು ಹೋರಾಟಗಾರ ಬಿರ್ಸಾಮುಂಡಾ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಸುನೀಲ್ ಬೋಸ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ರವಿಶಂಕರ್, ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಪ್ರಾದೇಶಿಕ ಆಯುಕ್ತ ರಮೇಶ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಾಯಿತ್ರಿ, ಡಿಎಚ್‌ಒ ಡಾ.ಕುಮಾರಸ್ವಾಮಿ, ಅರಣ್ಯ ಸೇವೆಯ ನಾಗರಹೊಳೆ ನಿರ್ದೇಶಕಿ ಪಿ.ಎಸ್. ಸೀಮಾ, ಆದಿವಾಸಿಗಳಾದ ಶಿವರಾಜು, ಸಂಜಯ್, ಕೃಷ್ಣಯ್ಯ, ನಾಗರಾಜು, ಶ್ರೀಧರ್, ಚಿಕ್ಕಬೊಮ್ಮ, ತಹಸೀಲ್ದಾರ್ ಶ್ರೀನಿವಾಸ್, ಟಿಎಚ್‌ಒ ರವಿಕುಮಾರ್, ಇಒ ಧರಣೇಶ್, ಸಮಾಜ ಕಲ್ಯಾಣಾಧಿಕಾರಿ ರಾಮಸ್ವಾಮಿ, ಗಿರಿಜನ ಅಭಿವೃದ್ಧಿ ಅಧಿಕಾರಿ ಮಹೇಶ್, ವಿಸ್ತರಣಾಧಿಕಾರಿ ನಾಗರಾಜು, ಕಬಿನಿ ಇಇ ಚಂದ್ರಶೇಖರ್, ಎಇಇ ಗಣೇಶ್, ಎಇ ರಮೇಶ್ ಬಾಬು, ಸಹಾಯಕ ಕೃಷಿ ನಿರ್ದೇಶಕ ಜಯರಾಮ್, ಆರ್‌ಎಫ್‌ಒಗಳಾದ ಮಧು, ಸಿದ್ದರಾಜು, ಪೂಜಾ, ರಶ್ಮಿ ಇದ್ದರು.

ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ: ಕೆರೆ ಹಾಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದ ವೇಳೆ ಸ್ಥಳೀಯ ಆದಿವಾಸಿ ಜನಾಂಗದವರು ಸಾಂಪ್ರದಾಯಿಕ ದಿರಿಸಿನೊಂದಿಗೆ ನೃತ್ಯ ಮಾಡಿ ಸ್ವಾಗತಿಸಿದರು. ಈ ವೇಳೆ ನೃತ್ಯ ಮಾಡುತ್ತಿದ್ದ ಆದಿವಾಸಿಗಳೊಂದಿಗೆ ಸಿದ್ದರಾಮಯ್ಯ ಸಹ ಕೋಲುಗಳನ್ನು ಹಿಡಿದು ಹೆಜ್ಜೆ ಹಾಕಿ ಅವರಿಗೆ ಸಾಥ್ ನೀಡಿದರು. ಮುಖ್ಯಮಂತ್ರಿ ಬೆಂಬಲಿಗರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net