
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕನ್ನಡದ ಹೆಸರಾಂತ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಕಳೆದ ವರ್ಷ “ಕೊಕೇನ್’ ಚಿತ್ರಕ್ಕಾಗಿ ಡೈರೆಕ್ಟರ್ ಕ್ಯಾಪ್ ಧರಿಸುವ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದರು. ಇದೀಗ ಹೀರೋ ಆಗಿ ಡೆಬ್ಯೂ ಮಾಡಲು ಸಜ್ಜಾಗಿದ್ದಾರೆ. ಚಿತ್ರದ ಹೆಸರು “ಒಂದು ಸುಂದರ ದೆವ್ವದ ಕಥೆ’. “ದಾಸರಹಳ್ಳಿ’, “ದೇವದೂತ’ ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳಿರುವ ನೃತ್ಯಸಂಯೋಜಕ ಎಂ.ಆರ್. ಕಪಿಲ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇದೇ 23ರಿಂದ ಶೂಟಿಂಗ್ ಪ್ರಾರಂಭವಾಗಲಿದೆ.
ಇದೇ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಬಗ್ಗೆ ಕೌರವ ವೆಂಕಟೇಶ್, “ಕಪಿಲ್ ಅವರ “ದಾಸರಹಳ್ಳಿ’ ಚಿತ್ರದಲ್ಲಿ ನಾನು ಅತಿಥಿ ಪಾತ್ರದಲ್ಲಿ ನಟಿಸಿದ್ದೆ. ಆಗ ಅವರು ಈ ಕಥೆ ಹೇಳಿ, ನಾನು ಪಾತ್ರಕ್ಕೆ ಸೂಟ್ ಆಗುತ್ತೇನೆ ಎಂದರು. ಕಥೆ ಮತ್ತು ಪಾತ್ರ ಇಷ್ಟವಾದ ಕಾರಣ, ನಾನೂ ಒಪ್ಪಿಕೊಂಡೆ. ನಾನಿಲ್ಲಿ ಗೂರ್ಖಾ ಪಾತ್ರದಲ್ಲಿ ನಟಿಸಲಿದ್ದೇನೆ. ಕಳ್ಳರನ್ನು ಹಿಡಿದು ಮನೆಗಳನ್ನು ರಕ್ಷಿಸುತ್ತಿರುತ್ತೇನೆ. ಆರು ಕೊಲೆಗಳು ನಡೆಯುತ್ತವೆ. ಅದರ ಸುತ್ತ ಹಾರರ್ ಅಂಶಗಳಿರುವ ಕಥೆಯಿದು. ಆ್ಯಕ್ಷನ್ಗೆ ಹೆಚ್ಚು ಪ್ರಾಮುಖ್ಯವಿರಲಿದೆ’ ಎಂದು ಮಾಹಿತಿ ನೀಡುತ್ತಾರೆ.
ಕೋರಿಯೋಗ್ರರ್ ಮತ್ತು ಆ್ಯಕ್ಷನ್ ಡೈರೆಕ್ಟರ್ ಜೋಡಿ “ಒಂದು ಸುಂದರ ದೆವ್ವದ ಕಥೆ’ಗೆ ಒಂದಾಗಿರುವುದು ಕುತೂಹಲ ಮೂಡಿಸುತ್ತದೆ. ಕೌರವ ವೆಂಕಟೇಶ್ ಜತೆ ಮುನಿರಾಜು, ಗುರುಪ್ರಸಾದ್, ಸುರೇಶ್ ಮುರಳಿ, ವಿಸಿಎನ್ ಮಂಜು, ವಿಕ್ಟರಿ ವಾಸು, ದಯಾಳನ್, ಶಂಕರ್ ಭಟ್, ಪ್ರೇಮ್ ಪಾವಗಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.
1862 ಚಿತ್ರಗಳಿಗೆ ಸಾಹಸ!
ಕೌರವ ವೆಂಕಟೇಶ್ ತಮ್ಮ ಮೂರು ದಶಕಗಳ ಸಿನಿಮಾ ಜರ್ನಿಯಲ್ಲಿ 1862 ಚಿತ್ರಗಳಲ್ಲಿ ಸಾಹಸ ನಿರ್ದೇಶನ ಮಾಡಿದ್ದಾರೆ. “ಕನ್ನಡದ ಜತೆಗೆ ತುಳು, ಹಿಂದಿ, ತೆಲುಗು, ಮರಾಠಿ, ತಮಿಳಿನಲ್ಲೂ ಸಾಹಸ ಸಂಯೋಜನೆ ಮಾಡಿದ್ದೇನೆ. ಬಹುಶಃ ಅತಿ ಹೆಚ್ಚು ಅರ್ಥಾತ್ 29 ತುಳು ಸಿನಿಮಾಗಳಿಗೆ ನಾನು ಆ್ಯಕ್ಷನ್ ಡೈರೆಕ್ಟ್ ಮಾಡಿದ್ದೇನೆ. ಈ ವರ್ಷ 2000 ಸಿನಿಮಾ ಪೂರೈಸುವ ವಿಶ್ವಾಸವಿದೆ. ಕಳೆದ ವರ್ಷ “ಕೊಕೇನ್’ ಮೂಲಕ ನಿರ್ದೇಶಕನಾದೆ. ಸದ್ಯ ಆ ಸಿನಿಮಾ ಕೊನೆಯ ಹಂತದಲ್ಲಿದ್ದು, ಸೆಪ್ಟೆಂಬರ್ನಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಅದಾಗುತ್ತಲೇ ನಿರ್ದೇಶಕನಾಗಿ ಇನ್ನೊಂದು ಸಿನಿಮಾ ಘೋಷಿಸಲಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ.