

ಉಡುಪಿ: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ , ಫೈನಾನ್ಸ್ ಗಳು, ಲೇವಾದೇವಿ ವ್ಯವಹಾರಸ್ಥರು, ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ಮಾರ್ಗದರ್ಶನ ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ಗಳು ಸಾಲ ಕೊಡುವ ಮುನ್ನ ಸಾಲಗಾರರ ಕುಟುಂಬದ ಆದಾಯ ಮತ್ತಿತರ ಪೂರ್ವಾಪರಗಳನ್ನು ಪರಿಶೀಲನೆಯನ್ನು ಮಾಡಿ, ಅವರ ಆದಾಯದ ಶೇ. 50 ರಷ್ಟು ಮಾತ್ರ ಸಾಲ ನೀಡಬೇಕು. ಸಾಲ ನೀಡುವವರು ಹಾಗೂ ತೆಗೆದುಕೊಳ್ಳುವವರು ಇಬ್ಬರೂ ಆರ್ಥಿಕ ಶಿಸ್ತನ್ನು ಪಾಲಿಸಬೇಕು ಎಂದರು.
ಆರ್.ಬಿ.ಐ ಮಾರ್ಗಸೂಚಿಯ ಪ್ರಕಾರ ಮೈಕ್ರೋ ಫೈನಾನ್ಸ್ಗಳು 3 ಲಕ್ಷ ರೂ. ವರೆಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಸಾಲ ಮರುಪಾವತಿ ಕಾನೂನಿನ ಅನ್ವಯ ನಡೆಯಬೇಕು. ಬೆಳಗ್ಗೆ 9 ರಿಂದ ಸಾಯಂಕಾಲ 6ರವರೆಗೆ ಮಾತ್ರ ಕಾರ್ಯನಿರ್ವಹಿಸಬೇಕು. ಕಾನೂನನ್ನು ಉಲ್ಲಂಘಿಸಿ, ದೌರ್ಜನ್ಯ, ಕೆಟ್ಟ ಪದಗಳಲ್ಲಿ ಬೈಯುವುದು, ದಬ್ಬಾಳಿಕೆ, ಕಿರುಕುಳ ನೀಡುವುದು ಮಾಡಿದ್ದಲ್ಲಿ ಅಂತಹವರ ವಿರುದ್ಧ ಪೊಲೀಸರು ಸೊಮೋಟೋ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶವಿದೆ ಎಂದು ಎಚ್ಚರಿಸಿದರು.
ಹಿಂದಿನ ಮಾಹಿತಿಯ ಆಧಾರದಲ್ಲಿ 120 ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದ್ದು, 25 ಸಂಸ್ಥೆಯ ಪ್ರಮುಖರು ಇಂದಿನ ಸಭೆಗೆ ಹಾಜರಾಗಿದ್ದರು. ಆರ್ಬಿಐ ನಿರ್ದೇಶನದಂತೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದರು.
ಜಿಲ್ಲಾ ಎಸ್ಪಿ ಡಾ.ಅರುಣ್ ಮಾತನಾಡಿ, ಕಳೆದ ವರ್ಷ ಮೈಕ್ರೋ ಫೈನಾನ್ಸ್ ಸಂಸ್ಥೆಯ ವಿರುದ್ಧ್ದ 2 ಎ್ಐಆರ್ ದಾಖಲಾಗಿದೆ. ನಂತರ 17 ದೂರು ಅರ್ಜಿಗಳು ಬಂದಿದ್ದು, ಅದರಲ್ಲಿ 9 ಅರ್ಜಿ ಸಾಲವನ್ನು ವಾಪಾಸು ಕೊಡಿಸಿ ಎಂಬುದಾಗಿದೆ. ನೊಂದಣಿ ಮಾಡಿಕೊಳ್ಳದೇ ಬಡ್ಡಿಗೆ ಹಣವನ್ನು ನೀಡುತ್ತಿರುವ ಯಾವುದೇ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಲೀಡ್ ಬ್ಯಾಂಕ್ ಮೆನೇಜರ್ ಹರೀಶ್ ಉಪಸ್ಥಿತರಿದ್ದರು.