

ಪುರುಷೋತ್ತಮ ಪೆರ್ಲ ಕಾಸರಗೋಡು
ಯುವಕರೇ ಕೃಷಿ ಕ್ಷೇತ್ರದಿಂದ ದೂರವಾಗುತ್ತಿರುವ ಕಾಲಘಟ್ಟದಲ್ಲಿ 78ರ ತುಂಬು ಹರೆಯದಲ್ಲೂ ವೃದ್ಧರೊಬ್ಬರು ಕೃಷಿ ಮಾಡುತ್ತಾ ಯುವಕರಿಗೆ ಮಾದರಿಯಾಗಿದ್ದಾರೆ. ಎಣ್ಮಕಜೆ ಪಂಚಾಯಿತಿಯ ನಲ್ಕ ಸನಿಹದ ವಾಟೆಕ್ಕಾಡಿನಲ್ಲಿ ನೆಲೆಸಿರುವ ಕಿನಿಲ ಸುಬ್ರಾಯ ಭಟ್ ಉತ್ಸಾಹಿ ಕೃಷಿಕ.
45 ವರ್ಷಕ್ಕೂ ಹಿಂದೆ ವಿಟ್ಲದ ಕಿನಿಲದಿಂದ ವಾಟೆಕ್ಕಾಡಿಗೆ ವಲಸೆ ಬಂದಿರುವ ಸುಬ್ರಾಯ ಭಟ್ ಎರಡೂಮುಕ್ಕಾಲು ಎಕರೆ ಪ್ರದೇಶದಲ್ಲಿ ಎಲ್ಲ ಕೃಷಿಯನ್ನೂ ತಾವೇ ನಡೆಸುತ್ತಾರೆ. ಅಡಕೆ, ತೆಂಗು, ಕಾಳುಮೆಣಸು, ಕೊಕ್ಕೊ, ಬಾಳೆ ಪ್ರಮುಖ ಬೆಳೆಯಾಗಿದ್ದರೆ, ನಾನಾ ತರದ ಮಾವು, ಜಾಯಿಕಾಯಿ, ಚಕೋತಾ, ಮಾಪಳ, ಹಲವು ತರದ ತರಕಾರಿ, ಹೂವಿನ ಗಿಡಗಳು ಇವರ ತೋಟದಲ್ಲಿ ಬೆಳೆಸುತ್ತಾರೆ.
ಶುದ್ಧ ದೇಸಿ ತಳಿ ರತ್ನಗಿರಿ ಹಾಗೂ ಊರ ಅಡಕೆ ಸಸಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಈ ಬಾರಿ 15 ಸಾವಿರಕ್ಕೂ ಹೆಚ್ಚು ರತ್ನಗಿರಿ ಸಸಿ ತಯಾರಿಸಿದ್ದಾರೆ. ಸಹಾಯಕ್ಕಾಗಿ ಒಂದಿಬ್ಬರು ಕಾರ್ಮಿಕರನ್ನು ಜತೆಗಿರಿಸಿಕೊಳ್ಳುವುದು ಬಿಟ್ಟರೆ, ಉಳಿದ ಬಹುತೇಕ ಕೆಲಸ ಇವರೇ ನಿರ್ವಹಿಸುತ್ತಾರೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಬೆಳೆ ತೆಗೆಯುವ ವ್ಯವಸ್ಥೆಯೊಂದಿಗೆ ಸುಬ್ರಾಯ ಭಟ್ಟರು ಕೃಷಿ ನಡೆಸುತ್ತಿದ್ದಾರೆ.
ಕೃಷಿ ನಡೆಸುವವರಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡುವ ಸುಬ್ರಾಯ ಭಟ್ಟರು, ಕೃಷಿ ಬಗ್ಗೆ ಸಮಗ್ರ ಮಾಹಿತಿ ಬಿಚ್ಚಿಡುತ್ತಾರೆ. ಪದವೀಧರರಾಗಿರುವ ಭಟ್ಟರಲ್ಲಿ ಅಪಾರ ಜ್ಞಾನವಿದೆ. ಇವರ ಕೃಷಿ ತೋಟಕ್ಕೆ ಕೃಷಿಕರು, ಸಂಶೋಧನಾ ವಿದ್ಯಾರ್ಥಿಗಳೂ ಭೇಟಿ ನೀಡಿ, ಇವರಿಂದ ಮಾಹಿತಿ ಪಡೆದುಕೊಳ್ಳುತ್ತಾರೆ. ಸಂಪೂರ್ಣ ಸಾವಯವ ಕೃಷಿ ನಡೆಸುವ ಸುಬ್ರಾಯ ಭಟ್ಟರು ಕೃಷಿಯನ್ನು ಪ್ರಯೋಗದ ರೀತಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ನೀರಿನ ಸಂರಕ್ಷಣೆಯಲ್ಲೂ ತೊಡಗಿಸಿಕೊಂಡಿರುವ ಇವರು ಗೃಹಬಳಕೆಗೆ ಸುರಂಗದ ನೀರನ್ನು ಬಳಸುತ್ತಿದ್ದರೆ, ತೋಟದಲ್ಲಿರುವ ಬೃಹತ್ ಕೆರೆಯ ಮಧ್ಯೆ ಕೊಳವೆಬಾವಿಯಿದ್ದು, ಇದರಿಂದ ನೀರು ನಿರಂತರವಾಗಿ ಕೊಳವೆಬಾವಿಯೊಳಗೆ ಇಂಗುತ್ತಿರುತ್ತದೆ. ಎರಡು ಗುಡ್ಡಗಳ ಮಧ್ಯೆ ಸುಬ್ರಾಯಭಟ್ಟರ ತೋಟವಿದ್ದು, ಇಲ್ಲಿ ನೀರಿಂಗಿಸುವ ಪ್ರಕೃತಿಯೇ ಪ್ರಾಕೃತಿಕವಾಗಿಯೇ ನಡೆಯುತ್ತಿರುತ್ತದೆ.
ಕೃಷಿ ಲಾಭದಾಯಕವಾಗಿಸಬೇಕಾದರೆ, ಖರ್ಚು-ವೆಚ್ಚ ಸಮದೂಗಿಸಿಕೊಳ್ಳಬೇಕು. ಧಾರಾಳ ನೀರಿದ್ದರೂ, ಅದಕ್ಕೆ ಬೇಕಾದಷ್ಟೇ ನೀರು ಹಾಕಿ. ಇನ್ನು ಗೊಬ್ಬರ ನೀಡುವ ವಿಚಾರದಲ್ಲೂ ಲೆಕ್ಕಾಚಾರವಿರಲಿ. ಒಂದೇ ಬೆಳೆ ನೆಚ್ಚಿಕೊಳ್ಳುವ ಬದಲು, ಎಡೆಬೆಳೆಗೆ ಪ್ರೋತ್ಸಾಹ ನೀಡಿ ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಬಹುದು - ಕಿನಿಲ ಸುಬ್ರಾಯ ಭಟ್ಟ ಪ್ರಗತಿಪರ ಕೃಷಿಕ, ವಾಟೆಕ್ಕಾಡು, ಎಣ್ಮಕಜೆ(9846918032)