

ಮುಂಬಯಿ: ಬಾಲಿವುಡ್ನ ಹಿರಿಯ ಕೊರಿಯೊಗ್ರಫರ್ ಸರೋಜ್ ಖಾನ್ ಕಾರ್ಡಿಯಾಕ್ ಅರೆಸ್ಟ್ನಿಂದಾಗಿ ಇಂದು ನಸುಕಿನ ವೇಳೆ ಕೊನೆಯುಸಿರೆಳೆದರು ಎಂದು ಅವರ ಸೋದರ ಸಂಬಂಧಿ ಮನಿಷ್ ಜಗ್ವಾನಿ ಪಿಟಿಐಗೆ ತಿಳಿಸಿದ್ದಾರೆ. ಎಪ್ಪತ್ತೆರಡು ವರ್ಷ ವಯಸ್ಸಿನ ಪ್ರಸಿದ್ಧ ನೃತ್ಯಸಂಯೋಜಕಿ ಸರೋಜ್ ಅವರನ್ನು ಮುಂಬಯಿಯ ಗುರುನಾನಕ್ ಹಾಸ್ಪಿಟಲ್ಗೆ ಅನಾರೋಗ್ಯ ಕಾರಣ ಜೂನ್ 20ರಂದು ಅಡ್ಮಿಟ್ ಮಾಡಲಾಗಿತ್ತು. ಅವರಿಗೆ ಉಸಿರಾಟದ ಸಮಸ್ಯೆ ಕಂಡು ಬಂದಿತ್ತು. ಆದಾಗ್ಯೂ ಕೋವಿಡ್ 19 ಟೆಸ್ಟ್ ನೆಗೆಟಿವ್ ಬಂದಿತ್ತು.
ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದ ಅವರು, ಹಿಂದಿ ಸಿನಿಮಾ ಕ್ಷೇತ್ರದಲ್ಲಿ ಸ್ಮರಣೀಯ ಹಾಡುಗಳಿಗೆ ನೃತ್ಯಸಂಯೋಜನೆ ಮಾಡಿ ಜನಪ್ರಿಯತೆ ಗಳಿಸಿದ್ದರು. ಅವರ ನಾಲ್ಕು ದಶಕಗಳ ಸಿನಿಮಾ ಜೀವಿತಾವಧಿಯಲ್ಲಿ 2,000ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯಸಂಯೋಜನೆ ಮಾಡಿದ್ದರು. ಸಂಜಯ್ ಲೀಲಾ ಬನ್ಸಾಲಿ ಅವರ ದೇವದಾಸ್ ಸಿನಿಮಾದ ಡೋಲಾ ರೇ ಡೋಲಾ ಹಾಡಿನ ನೃತ್ಯ, ಮಾಧುರಿ ದೀಕ್ಷಿತ್ ನಟನೆಯ ತೇಜಾಬ್ ಚಿತ್ರದ ಏಕ್ ದೋ ತೀನ್ ಹಾಡಿನ ನೃತ್ಯ, 2007ರಲ್ಲಿ ಜಬ್ ವಿ ಮೆಟ್ ಚಿತ್ರದ ಯೇ ಇಷ್ಕ್ ಹಾಯೇ ಹಾಡಿನ ನೃತ್ಯ ಸಂಯೋಜನೆ ಕೂಡಲೇ ನೆನಪಿಗೆ ಬರುವಂಥವು.
ಮೂರು ವರ್ಷದ ಬಾಲಕಿಯಾಗಿದ್ದಾಗ ಹಿನ್ನೆಲೆ ನೃತ್ಯಪಟುವಾಗಿ ವೃತ್ತಿ ಬದುಕು ಆರಂಭಿಸಿದ ಸರೋಜ, 1974ರಲ್ಲಿ ಗೀತಾ ಮೇರಾ ನಾಮ್ ಚಿತ್ರದ ಮೂಲಕ ಸ್ವತಂತ್ರ ನೃತ್ಯ ಸಂಯೋಜಕಿಯಾಗಿ ವೃತ್ತಿ ಬದುಕಿನ ಪ್ರಮುಖ ಮೈಲಿಗಲ್ಲು ಸ್ಥಾಪಿಸಿದರು. 1987ರ ಮಿಸ್ಟರ್ ಇಂಡಿಯಾ ಚಿತ್ರದ ಹವಾ ಹವಾಯಿ, 1992ರ ಬೇಟಾ ಚಿತ್ರದ ಧಕ್ ಧಕ್ ಕರನೇ ಲಗಾ ಹಾಡಿನ ನೃತ್ಯಗಳು ಇಂದಿಗೂ ಸ್ಮರಣೀಯ. ಕರಣ್ ಜೋಹರ್ 2019ರಲ್ಲಿ ನಿರ್ಮಿಸಿ ಕಲಂಕ್ ಚಿತ್ರದ ತಬಾಹ್ ಹೋ ಗಯೇ ಎಂಬ ಹಾಡಿಗೆ ಮಾಧುರಿ ದೀಕ್ಷಿತ್ ಅವರ ನೃತ್ಯಕ್ಕೆ ಕೊನೆಯದಾಗಿ ಕೊರಿಯೊಗ್ರಫಿ ಮಾಡಿದ್ದರು ಸರೋಜ್ ಖಾನ್. (ಏಜೆನ್ಸೀಸ್)