

ಮಂಗಳೂರು: ನಗರದಲ್ಲಿ ಅಪರೂಪದ ಹೆಬ್ಬಾವು ಅಕ್ರಮ ಮಾರಾಟ ಜಾಲ ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಅಪ್ರಾಪ್ತ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಮಂಗಳೂರಿನ ಬಡಗ ಉಳಿಪ್ಪಾಡಿ ನಿವಾಸಿ ವಿಹಾಲ್ ಎಚ್.ಶೆಟ್ಟಿ (18), ಸ್ಟೇಟ್‌ಬ್ಯಾಂಕ್ ಬಳಿಯ ಪೆಟ್‌ಝೋನ್ ಮಾಲೀಕ ಇಬ್ರಾಹೀಂ ಶಕೀಲ್ ಇಸ್ಮಾಯಿಲ್(35), ಪೆಟ್‌ಝೋನ್ ಸಿಬ್ಬಂದಿ ಮಹಮ್ಮದ್ ಮುಸ್ತಫಾ(22) ಹಾಗೂ ಮಂಗಳೂರಿನ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿ ಬಂಧಿತರು.
ಹೆಬ್ಬಾವು ಅಕ್ರಮ ಮಾರಾಟ ಜಾಲ ಸಕ್ರಿಯವಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಮಂಗಳೂರು ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಮತ್ತು ತಂಡ ಕಾರ್ಯಾಚರಣೆಗಿಳಿದಿದೆ. ಮೊದಲಿಗೆ ಇಬ್ಬರನ್ನು ಹೆಬ್ಬಾವು ಖರೀದಿಸುವ ಸೋಗಿನಲ್ಲಿ ಕಳುಹಿಸಿದೆ. ನಗರದ ಕದ್ರಿಯ ಅಶ್ವತ್ಥ ಕಟ್ಟೆಯ ಬಳಿ ಆಗಮಿಸಿದ ಆರೋಪಿ ವಿಹಾಲ್ ಎಚ್.ಶೆಟ್ಟಿ ಬಳಿಗೆ ಹೋದ ಅರಣ್ಯ ಇಲಾಖೆಯ ಕಡೆಯ ಇಬ್ಬರು ಹೆಬ್ಬಾವು ಖರೀದಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾವು ತೋರಿಸಿದ ಆತ 45 ಸಾವಿರ ರೂ.ಗೆ ವ್ಯವಹಾರ ಕುದುರಿಸಿದ್ದಾನೆ. ಈ ವೇಳೆ ಅರಣ್ಯ ಇಲಾಖೆ ದಾಳಿ ನಡೆಸಿ ಆತನನ್ನು ಬಂಧಿಸಿದೆ.
ಇದರಿಂದ ಭೀತಿಗೊಳಗಾದ ವಿಹಾಲ್ ಎಚ್.ಶೆಟ್ಟಿ, ಈ ಹಾವು ತನ್ನದಲ್ಲ. ಅಪ್ರಾಪ್ತನೊಬ್ಬ ಹೆಸರು ಹೇಳಿ ಆತ ತನಗೆ ಮಾರಲು ನೀಡಿದ್ದು ಎಂದು ಬಾಯಿ ಬಿಟ್ಟಿದ್ದಾನೆ. ತಕ್ಷಣ ಉಪಾಯವಾಗಿ ಅಪ್ರಾಪ್ತನಿಗೆ ಕರೆ ಮಾಡಿ ಮಾಲ್‌ವೊಂದರ ಬಳಿ ಹೋಗಿ ಆತನನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಹಾವು ಮಾರಾಟದ ಬಗ್ಗೆ ಸ್ಟೇಟ್‌ಬ್ಯಾಂಕ್‌ನಲ್ಲಿರುವ ಪೆಟ್‌ಝೋನ್ ಮೇಲೂ ಕಣ್ಣಿಟ್ಟಿದ್ದ ಅರಣ್ಯ ಇಲಾಖೆ ಇದೇ ಸಂದರ್ಭ ಗ್ರಾಹಕರ ಸೋಗಿನಲ್ಲಿ ಓರ್ವ ಯುವಕನನ್ನು ಅಲ್ಲಿಗೆ ಕಳುಹಿಸಿತ್ತು. ಆಗ ಅಲ್ಲಿನ ಸಿಬ್ಬಂದಿ ತಮ್ಮಲ್ಲಿ ಹಾವಿದೆ. ತರಿಸಿ ಕೊಡುತ್ತೇವೆ ಎಂದು ಬಂಧಿತ ವಿಹಾಲ್ ಶೆಟ್ಟಿಗೆ ಕರೆ ಮಾಡಿದ್ದಾರೆ. ತಕ್ಷಣ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಪೆಟ್‌ಝೋನ್‌ನ ಮಾಲೀಕ ಹಾಗೂ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಈ ಪೆಟ್‌ಝೋನ್‌ನಲ್ಲಿ ನಕ್ಷತ್ರ ಆಮೆಗಳೂ ಸಿಕ್ಕಿದ್ದು, ಅವನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.
ತಮಿಳುನಾಡಿನ ಲಿಂಕ್ ಪತ್ತೆ
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನುಸೂಚಿತ(ಶೆಡ್ಯೂಲ್ 1) ಭಾಗ ಸಿ ಪ್ರಾಣಿಯಾದ ಇಂಡಿಯನ್ ರಾಕ್ ಪೈಥಾನ್(ಹೆಬ್ಬಾವು) ಅನ್ನು ಆರೋಪಿಗಳು ಹೊರದೇಶದ ಬರ್ಮಿಸ್ ಬಾಲ್ ಪೈಥಾನ್ ಎಂದು ಮಾರುತ್ತಿದ್ದರು. ಇದನ್ನು ಕೆಲವರು ಮನೆಯಲ್ಲಿ ಸಾಕುವ ಉದ್ದೇಶದಿಂದ ಖರೀದಿಸುತ್ತಿದ್ದರು. ಈ ಜಾಲಕ್ಕೆ ತಮಿಳುನಾಡುವರೆಗೆ ಸಂಪರ್ಕವಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.