

ಬೆಂಗಳೂರು: ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು, 47.70 ಲಕ್ಷ ರೂ. ಮೌಲ್ಯದ 716 ಲೀಟರ್ ವಿದೇಶಿ ಮದ್ಯ ಮತ್ತು ವಾಹನವನ್ನು ಜಪ್ತಿ ಮಾಡಿದ್ದಾರೆ.
ಜ್ಞಾನಭಾರತಿ ಕ್ಯಾಂಪಸ್ ಮುಖ್ಯರಸ್ತೆಯ ಮುನೇಶ್ವರ ದೇವಸ್ಥಾನ ಹತ್ತಿರದ ರಸ್ತೆ ಮಾರ್ಗದಲ್ಲಿರುವ ನಂದಿನಿ ಬೂತ್ ಮುಂಭಾಗದ 8 ಲೀಟರ್., ದಾಸರಹಳ್ಳಿ ಹೌಸಿಂಗ್ ಬೋರ್ಡ್ ಮಾರ್ಗಮಧ್ಯದಲ್ಲಿರುವ ರಹೇಜಾ ಅಪಾರ್ಟ್ಮೆಂಟ್ ಎದುರು 7 ಲೀ. ಮತ್ತು ಕಾಮಾಪಾಳ್ಯದ ಮೀನಾನಗರದ 4ನೇ ಮುಖ್ಯರಸ್ತೆಯಲ್ಲಿರುವ ಶಾರದಾಂಬ ಪಿಜಿ ಕಟ್ಟಡದ ನೆಲಮಹಡಿ ಗೋಡೌನ್ನಲ್ಲಿ 163 ಲೀ ಸೇರಿ ಒಟ್ಟು 178 ಲೀಟರ್ ಡಿಫೆನ್ಸ್ ಮತ್ತು ವಿದೇಶಿ ಮದ್ಯ ವಶಪಡಿಸಿಕೊಂಡು 2 ಕೇಸ್ಗಳನ್ನು ದಾಖಲಿಸಲಾಗಿದೆ. ಮೀನಾ ನಗರದ 4ನೇ ಮುಖ್ಯಯಲ್ಲಿರುವ ಮನೆಯೊಂದರಲ್ಲಿ 39 ಲಕ್ಷ ರೂ. ಮೌಲ್ಯದ 538 ಲೀ. ವಿದೇಶಿ ಮದ್ಯ ಜಪ್ತಿ ಮಾಡಲಾಗಿದೆ.
ಇಲಾಖೆ ವಶದಲ್ಲಿದ್ದ ವೇಳೆ ಪ್ರಕರಣದ ಪ್ರಮುಖ ಆರೋಪಿ ಕಾಮಾಪಾಳ್ಯದ ನಿವಾಸಿ ಕೆ.ವಿ. ಜಗನ್ನಾಥ, ಟಾಯ್ಲೆಟ್ ಕ್ಲಿನಿಂಗ್ ಲಿಕ್ವಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯೆ ಯತ್ನ ಮತ್ತು ಸರ್ಕಾರದ ಕೆಲಸಕ್ಕೆ ಅಡ್ಡಿಪಡಿಸಿದ್ದ ಮೇರೆಗೆ ಈತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ತೆರಿಗೆರಹಿತ ಮದ್ಯ ದಾಸ್ತಾನು ಮಾಡಿದ್ದ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ 28 ಲಕ್ಷ ರೂ. ಆದಾಯ ನಷ್ಟವಾಗಿದೆ. ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರ ಬಿಯುಡಿ-3 ಉಪ ಆಯುಕ್ತ ಕೆ.ಎಸ್. ಮುರಳಿ ನೇತೃತ್ವದಲ್ಲಿ ಉಪ ಅಧೀಕ್ಷಕ ಎಂ.ಸಿ. ಶಂಕರ, ನಿರೀಕ್ಷಕರಾದ ಪಿ.ಜಿ. ರಾವೇಂದ್ರ, ಎ.ಎಚ್. ಕೃಷ್ಣಮೂರ್ತಿ, ಉಪ ನಿರೀಕ್ಷಕ ಎಸ್.ಎನ್. ವಾಸುದೇವ್ ಇತರೆ ಅಧಿಕಾರಿಗಳಿದ್ದರು.