

ಮುಂಬೈ: ಕರೊನಾ ಸೋಂಕಿನ ಪರೀಕ್ಷೆಗಳಿಗೆ ಬೋಗಸ್ ವರದಿಗಳನ್ನು ನೀಡುತ್ತಿದ್ದ 11 ಖಾಸಗಿ ಲ್ಯಾಬೋರೇಟರಿಗಳ ಅಕ್ರೆಡಿಟೇಷನ್ಅನ್ನು ಮಹಾರಾಷ್ಟ್ರದ ಅಮರಾವತಿ ಜಿಲ್ಲಾಧಿಕಾರಿಗಳು ರದ್ದು ಮಾಡಿದ್ದಾರೆ. ಕರೊನಾ ರಾಪಿಡ್ ಆಂಟಿಜೆನ್ ಟೆಸ್ಟ್ ನಡೆಸುತ್ತಿದ್ದ ಈ ಲ್ಯಾಬ್ಗಳು ಹಲವು ನಕಲಿ ವರದಿಗಳನ್ನು ನೀಡಿದ್ದಲ್ಲದೆ ಐಸಿಎಂಆರ್ ಪೋರ್ಟಲ್ಗೆ ಸಮಯಕ್ಕೆ ಸರಿಯಾಗಿ ವರದಿ ನೀಡುತ್ತಿರಲಿಲ್ಲ ಎನ್ನಲಾಗಿದೆ.
ಬೋಗಸ್ ಪರೀಕ್ಷೆಗಳನ್ನು ನಡೆಸುತ್ತಿರುವ ಬಗ್ಗೆ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಮಾರ್ಗಸೂಚಿಗಳನ್ನು ಪಾಲಿಸದಿರುವ ಬಗ್ಗೆ ಅಮರಾವತಿ ಜಿಲ್ಲೆಯ ಕೆಲವು ಖಾಸಗಿ ಲ್ಯಾಬ್ಗಳ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿರುವ ಜಿಲ್ಲಾಡಳಿತ 11 ಲ್ಯಾಬ್ಗಳಿಗೆ ನೀಡಲಾದ ಮಾನ್ಯತೆಯನ್ನು ವಾಪಸ್ ಪಡೆದಿದೆ ಎನ್ನಲಾಗಿದೆ.
ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು, ಅಕೋಲಾ, ಅಮರಾವತಿ ಮತ್ತು ವಾಶಿಮ್ ಜಿಲ್ಲೆಗಳಲ್ಲಿ ನಡೆದಿರುವ ಆರ್ಟಿಪಿಸಿಆರ್ ಪರೀಕ್ಷೆಗಳ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ರಾಪಿಡ್ ಆಂಟಿಜನ್ ಟೆಸ್ಟ್ ಶೇ. 30-35 ನಿಖರವಾದ ಡಯಾಗ್ನಸಿಸ್ ಮಾಡಿದರೆ, ಆರ್ಟಿಪಿಸಿಆರ್ ಪರೀಕ್ಷೆಗಳು ಶೇ.60-65 ರಷ್ಟು ನಿಖರ ಮಾಹಿತಿಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ