

ಮಧುಗಿರಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಕರೊಬ್ಬರನ್ನು ನೋಡಿಕೊಂಡು ಬರಲೆಂದು ಹೋಗಿದ್ದ 7 ಜನರ ಪೈಕಿ ಒಂದೇ ಕುಟುಂಬದ ಮೂವರು ಮಾರ್ಗಮಧ್ಯೆ ದುರ್ಮರಣಕ್ಕೀಡಾಗಿದ್ದಾರೆ.
ಸೀಮಾಂಧ್ರದ ಎನ್.ಆರ್.ರೊಪ್ಪಂ ಗ್ರಾಮದ ನರಸಿಂಹಮೂರ್ತಿ(32), ಪಾವಗಡ ತಾಲೂಕಿನ ನಲ್ಲಿಗಾನಹಳ್ಳಿಯ ದುರ್ಗಪ್ಪ(21) ಹಾಗೂ ನರಸಮ್ಮ(35) ಮೃತರು. ಇದನ್ನೂ ಓದಿರಿ ಅಮಾವಾಸ್ಯೆ ದಿನ ಸಂಭವಿಸಿತು ಭೀಕರ ಅಪಘಾತ! ಈ ದೃಶ್ಯ ನೋಡಿದ್ರೆ ಬೆಚ್ಚಿಬೀಳ್ತೀರಿ…
ಏನಾಯ್ತು?: ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರೊಬ್ಬರನ್ನು ನೋಡಲೆಂದು ನರಸಿಂಹಮೂರ್ತಿ, ದುರ್ಗಪ್ಪ, ನರಸಮ್ಮ, ಗೋವಿಂದಪ್ಪ, ಅಲುವೇಲಮ್ಮ, ಮಾರಪ್ಪ ಮತ್ತು ಗೋಪಾಲ್ ಅವರು ಇನೋವಾ ಕಾರಿನಲ್ಲಿ ಶುಕ್ರವಾರ ತೆರಳಿದ್ದರು. ಅವರ ಯೋಗಕ್ಷೇಮ ವಿಚಾರಿಸಿಕೊಂಡು ರಾತ್ರಿ ವಾಪಸ್ ಆಗುತ್ತಿದ್ದರು. ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿ ಚಂದ್ರಬಾವಿ ಬಳಿಯ ರಸ್ತೆಬದಿ ಕೆಟ್ಟುನಿಂತಿದ್ದ ಲಾರಿಗೆ ಇವರು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಕಾರು ಡಿಕ್ಕಿಯಾದ ರಭಸಕ್ಕೆ ನರಸಿಂಹಮೂರ್ತಿ, ದುರ್ಗಪ್ಪ, ನರಸಮ್ಮ ಸ್ಥಳದಲ್ಲೇ ಅಸುನೀಗಿದರು. ಹಿಂಬದಿ ಕುಳಿತ್ತಿದ್ದ ಗೋಪಾಲ್ ಪ್ರಾಣಾಪಾಯದಿಂದ ಪಾರಾದರು. ಇನ್ನುಳಿದ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.