ಹಾಸನ: ಕ್ರೀಡಾ ಚಟುವಟಿಕೆಗಳಿಂದ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬಹುದು ಎಂದು ದೈಹಿಕ ಶಿಕ್ಷಣ ಶಿಕ್ಷಕ ಮೆಹಬೂಬ್ ಖಾನ್ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕು ಒಕ್ಕಲಿಗರ ಮಹಿಳಾ ಸಂಘದ ಸದಸ್ಯರಿಗಾಗಿ ಪಟ್ಟಣದ ಸರ್ವೋದಯ ಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಥ್ರೋಬಾಲ್, ಹಗ್ಗ-ಜಗ್ಗಾಟ, ಕಬಡ್ಡಿ ಸೇರಿದಂತೆ ನಾನಾ ಕ್ರೀಡೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಒಕ್ಕಲಿಗರ ಮಹಿಳಾ ಸಂಘವು ಮಹಿಳೆಯರಿಗಾಗಿ ಪ್ರತಿವರ್ಷ ಕ್ರೀಡಾಕೂಟ ಏರ್ಪಡಿಸುತ್ತಿರುವುದು ಶ್ಲಾಘನೀಯ. ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ ಕ್ರೀಡಾ ಮನೋಭಾವ ಮೆರೆಯಬೇಕು ಎಂದರು.
ಒಕ್ಕಲಿಗರ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ವೈ.ಆರ್.ಭಾರತೀಗೌಡ ಮಾತನಾಡಿ, ತಾಲೂಕಿನಲ್ಲಿ ಕಳೆದ 6 ವರ್ಷಗಳಿಂದ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತಿದೆ. ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಪುರುಷರಿಗೆ ಸರಿ ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ತಮ್ಮ ಕೆಲಸ ಕಾರ್ಯಗಳ ಒತ್ತಡದಿಂದ ಸ್ವಲ್ಪಮಟ್ಟಿಗೆ ಬಿಡುವು ಮಾಡಿಕೊಂಡು ಇಂತಹ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಈ ಮೂಲಕ ತಮ್ಮ ಮಕ್ಕಳಿಗೂ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಕ್ರೀಡೆಯಲ್ಲಿ ವಿಜೇತರಾದವರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದು ಪ್ರಶಸ್ತಿ ವಿತರಿಸಲಾಗುವುದು ಎಂದರು.
ಮಹಿಳಾ ಒಕ್ಕಲಿಗರ ಸಂಘದ ಗೌರವಾಧ್ಯಕ್ಷೆ ಶ್ರೀದೇವಿ, ಪ್ರಧಾನ ಕಾರ್ಯದರ್ಶಿ ಕವಿತಾ, ಸಹ ಕಾರ್ಯದರ್ಶಿ ಸುಧಾ, ಖಜಾಂಚಿ ಆರ್.ಟಿ.ಉಷಾದೇವಿ, ಕ್ರೀಡಾ ಸಂಯೋಜಕಿ ಆಶಿಕಾ, ಭವ್ಯಾ ಹಾಗೂ ಉಪನ್ಯಾಸಕ ನೀತೀನ್ ಗೌಡ ಇದ್ದರು.