ಉತ್ತಮ ಬದುಕಿಗೆ ಒಳಿತನ್ನು ಸ್ವೀಕರಿಸಿ: ಲೇಖಕಿ ಡಾ.ಎಸ್.ಪಿ.ಉಮಾದೇವಿ ಸಲಹೆ

9
Published on

ಮೈಸೂರು: ಮನುಷ್ಯ ಬದುಕನ್ನು ಉತ್ತಮ ಪಡಿಸಿಕೊಳ್ಳಲು ಎಲ್ಲೆಲ್ಲಿ ಒಳಿತುಗಳಿರುತ್ತವೆಯೋ ಅವುಗಳನ್ನು ಸ್ವೀಕರಿಸಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕರಾದ ಲೇಖಕಿ ಡಾ.ಎಸ್.ಪಿ.ಉಮಾದೇವಿ ಸಲಹೆ ನೀಡಿದರು.

ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಕಲಾ ವಿಭಾಗದಿಂದ ಆಯೋಜಿಸಲಾಗಿದ್ದ ಕಲಾ ವೈಭವ ‘ವರ್ಣಿಕ’ ಪ್ರತಿಭಾ ಪರ್ವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲೆಗೆ ವಯಸ್ಸಿನ ಮಿತಿ ಇಲ್ಲ, ಪ್ರತಿಯೊಂದು ಜೀವಿಯಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಇಂತಹ ಕಾರ್ಯಕ್ರಮಗಳು ಅಗತ್ಯ. ಪಠ್ಯಪುಸ್ತಕಗಳು ಜೀವನದಲ್ಲಿ ಎಲ್ಲವನ್ನೂ ಕಲಿಸುವುದಿಲ್ಲ. ಪಠ್ಯೇತರ ಚಟುವಟಿಕೆ ಮನುಷ್ಯನನ್ನು ವಿಕಾಸ ಶೀಲನನ್ನಾಗಿ ಮಾಡುತ್ತದೆ ಎಂದರು.

ಕಲೆಗೆ ಎಲ್ಲರನ್ನು ಬೆಳೆಸುವ ಹಾಗೂ ಸೆಳೆಯುವ ಶಕ್ತಿಯಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನಿವೃತ್ತ ಪ್ರಾಂಶುಪಾಲ, ಸಂತ ಶಿಶುನಾಳ ಶರೀಫ ಪ್ರಶಸ್ತಿ ಪುರಸ್ಕೃತ ಪ್ರೊ.ಎಸ್.ಮಲ್ಲಣ್ಣ ಮಾತನಾಡಿ, ನಾವು ಓದಿದ ದಿನಗಳಲ್ಲಿದ್ದ ಪಠ್ಯೇತರ ಚಟುವಟಿಕೆಗಳು ನಮ್ಮನ್ನು ಕ್ರಿಯಾಶೀಲಗೊಳಿಸಿವೆ. ವಿದ್ಯೆಯ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ನಮ್ಮ ಬದುಕು ಸುಂದರವಾಗುತ್ತದೆ ಎಂದು ಹೇಳಿದರು.

ಎಲ್ಲಿ ಸಂಸ್ಕೃತಿ ಇರುವುದಿಲ್ಲವೊ ಅಲ್ಲಿ ಅರಾಜಕತೆ ನಿರ್ಮಾಣಗೊಳ್ಳುತ್ತದೆ. ಇಂತಹ ಕಲಾ ವೈಭವದಲ್ಲಿ ಅಂತರ ಕಾಲೇಜುಗಳ ವಿವಿಧ ಸ್ಪರ್ಧೆಗಳು ನಡೆಯುವುದರಿಂದ ಪರಸ್ಪರ ಸ್ನೇಹ ಮತ್ತು ಸೌಹಾರ್ದತೆ ಬೆಳೆಯುತ್ತದೆ ಎಂದು ಹೇಳಿ, ಕವಿ ಗೋಪಾಲಕೃಷ್ಣಅಡಿಗ ರಚಿತ ಭಾವಗೀತೆಯನ್ನು ಹಾಡಿದರು.

ಜೆಎಸ್‌ಎಸ್ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾದ ಚಲನಚಿತ್ರ ನಟ ಹಾಗೂ ನಿರ್ದೇಶಕ ವಿಕ್ಕಿ ವರುಣ್ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ತನಗಿದ್ದ ಭಯ ಮತ್ತು ಆತಂಕವನ್ನು ನಿವಾರಿಸಿ ಒಬ್ಬ ಸದೃಢ ವ್ಯಕ್ತಿಯಾಗಿ, ನಟನಾಗಿ ನಿಲ್ಲಲು ಜೆಎಸ್‌ಎಸ್ ಸಂಸ್ಥೆಯ ಸಹಕಾರವಿದೆ ಎಂದು ಅನುಭವ ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ನಾವು ನೋಡಿದ ಕನ್ನಡಿ ನಮ್ಮ ನಿಜರೂಪವನ್ನು ತಿಳಿಸುತ್ತದೆ. ನಮ್ಮ ಬಾಹ್ಯ ಸೌಂದರ್ಯಕ್ಕಿಂತ ಅಂತರಂಗ ಸೌಂದರ್ಯ ಬಹುಮುಖ್ಯ. ಕಲೆಗಳ ಹಿಂದೆ ತಾಯಿ ತತ್ವವಿದೆ. ತಾಯಿ ಹೇಗೆ ನಮ್ಮನ್ನು ಕಾಪಾಡಿ ಪೋಷಿಸುತ್ತಾಳೊ ಹಾಗೆಯೇ ಕಲೆ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು.

ಪ್ರಾಂಶುಪಾಲ ಡಾ.ರೇಚಣ್ಣ, ಕಾರ್ಯಕ್ರಮದ ಸಂಚಾಲಕ ಡಾ.ಬಿ.ಪಿ.ಷಡಕ್ಷರಿ ಇತರರು ಇದ್ದರು. ಡಾ.ಎಸ್.ಪಿ.ಉಮಾದೇವಿ ಅವರು ರಚಿಸಿರುವ ’ ಕವಿತೆಯ ದೃಶ್ಯಕಾವ್ಯವನ್ನು ಬಿತ್ತರಿಸಲಾಯಿತು. ಈ ಸಂದರ್ಭದಲ್ಲಿ ’ಕಂಗ್ರಾಜುಲೇಶನ್ ಬ್ರದರ್ ’ ಚಿತ್ರತಂಡದ ನಾಯಕ, ನಾಯಕಿ, ನಿರ್ದೇಶಕರು, ಕಲಾವಿದರು ಆಗಮಿಸಿ ಕಾರ್ಯಕ್ರಮ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net