ನಂದ್ರೋಳ್ಳಿ-ಬೆಳ್ಳಾಲ ರಸ್ತೆಗೆ ಬಾಗಿದ ಅಕೇಶಿಯಾ ಮರ

gan (18)
Published on

ಕುಂದಾಪುರ: ಕುಂದಾಪುರ ತಾಲೂಕು ನಂದ್ರೋಳ್ಳಿ ಮೂಲಕ ಬೆಳ್ಳಾಲ ಸಂಪರ್ಕಿಸುವ ರಸ್ತೆಗಳಿಗೆ ಅಕೇಶಿಯಾ ಮರ ವಾಲಿಕೊಂಡಿದ್ದು ಯಾವ ಕ್ಷಣದಲ್ಲಿ ಬೇಕಾದರೂ ಬೀಳಬಹುದು. ಮಳೆಗಾಲ ಆರಂಭಗೊಂಡಿದ್ದು ಇಲಾಖೆ ರಸ್ತೆಗೆ ವಾಲಿಕೊಂಡಿರುವ, ಬೀಳುವ ಸ್ಥಿತಿಯಲ್ಲಿರುವ ಮರಗಳ ಕಾಂಡ ತೆರವು ಮಾಡುವ ತುರ್ತು ಕಾರ್ಯಾಚರಣೆ ಮಾಡಿಲ್ಲ. ವಂಡ್ಸೆಯಿಂದ ಜಡ್ಡು, ನ್ಯಾಗಳಮನೆ, ನಂದ್ರೋಳಿ, ಬೆಳ್ಳಾಲಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ, ಕೆರಾಡಿ, ಬೆಳ್ಳಾಲ, ಮುಡುಮುಂದ, ಹೆಮ್ಮಕ್ಕಿ, ನೂಜು ಭಂಡ್ರಾಡಿ ಮೊದಲಾದ ಪ್ರದೇಶಗಳಿಗೆ ಇದು ಸುಲಭ ಮಾರ್ಗ. ಸಾಕಷ್ಟು ಜನಾಗ್ರಹದ ಮೂಲಕ ನಂದ್ರೋಳ್ಳಿ-ಬೆಳ್ಳಾಲ ರಸ್ತೆ ಅಭಿವೃದ್ಧಿ ಹೊಂದಿತ್ತು. ಆದರೆ ಪ್ರತೀ ವರ್ಷ ಈ ರಸ್ತೆ ಮೇಲೆ ಮರ ಬೀಳುವ ಸಮಸ್ಯೆ. ಅರಣ್ಯ ಇಲಾಖೆ ನೆಟ್ಟಿರುವ ಅಕೇಶಿಯಾ ಮರಗಳು ರಸ್ತೆಗೇ ವಾಲಿಕೊಂಡಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿವೆ. ರಸ್ತೆಗೆ ಚಾಚಿಕೊಂಡಿರುವ, ರಸ್ತೆಗೆ ಅಡ್ಡ ತೋರಣ ಕಟ್ಟಿದಂತೆ ಮರಗಳು ವಾಲಿಕೊಂಡಿವೆ. ಆದರೆ ಸಂಬಂಧಪಟ್ಟವರ ಮೌನ ನಿತ್ಯ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರತೀ ವರ್ಷ ಮಳೆಗಾಲದಲ್ಲಿ ಈ ರಸ್ತೆ ಮೇಲೆ ಆಕೇಶಿಯಾ ಮರ ಬಿದ್ದು ರಸ್ತೆ ಸಂಚಾರ ವ್ಯತ್ಯಯ ಉಂಟಾಗುತ್ತದೆ. ಎರಡು-ಮೂರು ಕಿ.ಮೀ. ತನಕ ಇದೇ ರೀತಿ ಮರ ರಸ್ತೆಗೆ ಬೀಳುವ ಸ್ಥಿತಿಯಲ್ಲಿದ್ದರೂ ಅರಣ್ಯ ಇಲಾಖೆ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ, ರಸ್ತೆಗೆ ಬಾಗಿರುವ ಮರದ ಕೊಂಬೆ ತಗೆಯುವ ಕೆಲಸ ಮಾಡುತ್ತಿಲ್ಲ. ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಸ್ಥಿತಿ ಇದೆ. ಈ ರಸ್ತೆಯ ಎರಡು ಕಡೆ ದಟ್ಟ ಕಾಡು, ಮರ ಇರುವುದರಿಂದ ರಸ್ತೆಯ ಪಯಣ ಅಪಾಯಕಾರಿ ಅನ್ನಿಸುತ್ತದೆ. ಗ್ರಾಮೀಣ ರಸ್ತೆ ಅಭಿವೃದ್ಧಿ, ಸುರಕ್ಷತೆಗೆ ಒತ್ತು ಕೊಡಬೇಕಾದ ಇಲಾಖೆ ಮಳೆಗಾಲದ ಪೂರ್ವದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡರೆ ಅನಾಹುತ ತಡೆಯಲು ಸಾಧ್ಯ.

ವಾಹನಗಳ ಸಂಚಾರಕ್ಕೆ ಅಡ್ಡಿ

ಮರಗಳು ವಾಲಿಕೊಂಡಿರುವುದರಿಂದ ಬಸ್ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಶಾಲಾ ವಾಹನ ತಿರುಗಾಡುತ್ತವೆ. ಕೆರಾಡಿ, ಬೆಳ್ಳಾಲ ಭಾಗಕ್ಕೆ ಬಸ್ ಸಂಚಾರ ಕಡಿಮೆ ಇರುವುದರಿಂದ ರಿಕ್ಷಾಗಳನ್ನೇ ಜನ ಅವಲಂಬಿಸುತ್ತಾರೆ. ಒಂದು ದೊಡ್ಡ ಗಾಳಿ ಬಂದರೆ ಇನ್ನಷ್ಟು ಕೆಳಗೆ ಬಾಗಿ ಬಸ್, ಲಾರಿ, ರಿಕ್ಷಾ ಮುಂತಾದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಹಾಗಾಗಿ ಈ ಮಾರ್ಗವನ್ನು ಅನುಸರಿಸುವವರ ಸಂಖ್ಯೆ ಹೆಚ್ಚು. ಆದರೆ ರಸ್ತೆಯ ಎರಡು ಕಡೆ ಆಕೇಶಿಯಾ ಮರ ವಾಲಿಕೊಂಡಿವೆ. ಯಾವ ಸಂದರ್ಭದಲ್ಲಿ ಈ ಆಕೇಶಿಯಾ ಮರ ರಸ್ತೆಗೆ ಅಡ್ಡವಾಗಿ ಬೀಳುತ್ತವೆ ಎಂದು ಹೇಳಲಾಗದು.

ಈ ರಸ್ತೆಯ ಅಭಿವೃದ್ಧಿಗೆ ಇಲಾಖೆೆಗಳು ಹೆಚ್ಚಿನ ಒತ್ತು ನೀಡಬೇಕಾಗಿದೆ. ಮರಗಳು ರಸ್ತೆಗೆ ಬಾಗಿಕೊಂಡಿವೆ. ದೊಡ್ಡ ವಾಹನ ಬಂದರೆ ಮೇಲ್ಭಾಗಕ್ಕೆ ತಾಗುವಷ್ಟು ಮರ ಬಾಗಿವೆ. ಅರಣ್ಯ ಇಲಾಖೆಯ ಭಯದಿಂದ ಸಾರ್ವಜನಿಕರು ತೆರವು ಮಾಡಲೂ ಭಯ ಪಡುತ್ತಾರೆ. ಅರಣ್ಯ ಇಲಾಖೆ ರಸ್ತೆಗೆ ಬಾಗಿದ ಮರ ತೆರವು ಮಾಡಿ ಸಾರ್ವಜನಿಕರ ಬಗ್ಗೆ ಕಾಳಜಿ ವಹಿಸಬೇಕು. ಮರ ರಸ್ತೆಗೆ ಬಿದ್ದರೆ ಸಂಭಾವಿಸುವುದಾದ ಹಾನಿ, ಸರ್ಕಾರಕ್ಕೆ ಆಗುವ ನಷ್ಟ, ಇದರ ಬಗ್ಗೆ ಇಲಾಖೆ ಅಧಿಕಾರಿಗಳು ಯೋಚನೆ ಮಾಡಬೇಕಾಗಿದೆ. ಸಂತೋಷ್, ನಿತ್ಯ ಪ್ರಯಾಣಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net