ಭೂಸ್ವಾಧೀನ ಅಧಿಕಾರಿ ಕಚೇರಿ ಜಪ್ತಿಗೆ ಅಧಿಕಾರಿಗಳ ಆಗಮನ

Untitled-1
Published on

ಪುತ್ತೂರು: ಭೂಸ್ವಾಧೀನ ಪರಿಹಾರ ಮೊತ್ತ ೧೪.೯೩ ಲಕ್ಷ ರೂ. ಪಾವತಿಸಲು ತಪ್ಪಿದ ಹಿನ್ನೆಲೆಯಲ್ಲಿ ಭೂಸ್ವಾಧಿನ ಅಧಿಕಾರಿ, ಪುತ್ತೂರು ಸಹಾಯಕ ಆಯುಕ್ತರ ಕಚೇರಿಯ ಚರ ಸೊತ್ತುಗಳು ಹಾಗೂ ವಾಹನ ಜಪ್ತಿಗೆ ಹೊರಡಿಸಿದ ಆದೇಶದಂತೆ ಗುರುವಾರ ನ್ಯಾಯಾಲಯದ ನಿಯೋಜಿತ ಅಧಿಕಾರಿಗಳು ಆಗಮಿಸಿದ್ದಾರೆ.

ಆಡಳಿತ ಸೌಧದಲ್ಲಿನ ಮೂರನೇ ಮಹಡಿಯಲ್ಲಿರುವ ಸಹಾಯಕ ಆಯುಕ್ತರ ಕಚೇರಿಗೆ ಬೆಳಗ್ಗೆ ನ್ಯಾಯಾಲಯದಿಂದ ಸಂಜೀವ ಹಾಗೂ ಗಣೇಶ್ ಆಗಮಿಸಿದ್ದಾರೆ.

ಸುಮಾರು ಅರ್ಧ ತಾಸು ಕಳೆದರೂ ಆಗಮಿಸಿದಿದ್ದಾಗ ವ್ಯವಸ್ಥಾಪಕರು ಕಚೇರಿಗೆ ಯಾಕೆ ಬಂದಿಲ್ಲ ಎಂದು ವಿಚಾರಿಸಿದಾಗ ನ್ಯಾಯಾಲಯಕ್ಕೆ ಹೋಗಿರುವುದಾಗಿ ತಿಳಿಸಿದ್ದಾರೆ. ಯಾವ ನ್ಯಾಯಾಲಯ, ನಾವು ನ್ಯಾಯಾಲಯದಿಂದಲೇ ಬಂದಿರುವುದು ಎಂದು ತಿಳಿಸಿದ ಬಳಿಕ ತಾಲೂಕು ಆಡಳಿತದಲ್ಲಿರುವ ಸರ್ಕಾರಿ ವಕೀಲರ ಕಚೇರಿಗೆ ವ್ಯವಸ್ಥಾಪಕ ನಾಗರಾಜ್ ಆಗಮಿಸಿದ್ದಾರೆ.

ಸ್ವಾಧೀನಪಡಿಸುವಂತೆ ನ್ಯಾಯಾಲಯ ಹಲವು ದಿನಗಳ ಹಿಂದೆಯೇ ಆದೇಶ ನೀಡಿದ್ದು, ಕೊನೆಯ ಕ್ಷಣದ ತನಕವೂ ಪ್ರಕ್ರಿಯೆಗೆ ಮುಂದಾಗಿರಲಿಲ್ಲ. ನ್ಯಾಯಾಲಯಕ್ಕೆ ಆ.೧ಕ್ಕೆ ಸೊತ್ತುಗಳ ಹಾಜರುಪಡಿಸುವ ಅನಿವಾರ್ಯತೆ ಎದುರಾಗಿದೆ. ಭೂಮಾಲೀಕರ ಪರವಾಗಿ ಸಂತೋಷ, ವಕೀಲ ಶಿವಪ್ರಸಾದ್ ಇ. ಗೌರೀಶ್ ಕಂಪ ಹಾಜರಿದ್ದರು.

ಎಸ್‌ಐಟಿ ತನಿಖೆಯ ನೆಪ!

ಜಪ್ತಿ ಪ್ರಕ್ರಿಯೆ ನಡೆಸಲು ಸಹಾಯಕ ಆಯುಕ್ತರು ಇಲ್ಲದ ಮತ್ತು ಎಸ್‌ಐಟಿ ತನಿಖೆಯ ನೆಪ ನೀಡಲಾಗಿದೆ. ಸಹಾಯಕ ಆಯುಕ್ತರು ಧರ್ಮಸ್ಥಳದಲ್ಲಿ ಅನಾಮಿಕ ತೋರಿಸಿದ ಜಾಗದಲ್ಲಿ ಇರಬಹುದಾದ ಮೃತದೇಹಗಳನ್ನು ಹೊರತೆಗೆದು ಶವ ತನಿಖಾ ಮಹಜರು ನಡೆಸುವ ಬಗ್ಗೆ ಎಸ್‌ಐಟಿಯಿಂದ ಜುಲೈ೨೮ರಂದು ನೀಡಿದ ಪತ್ರವನ್ನು ನ್ಯಾಯಾಲಯದ ಅಧಿಕಾರಿಗಳಿಗೆ ನೀಡಲಾಗಿದೆ. ಕೊನೆಗೆ ಕರ್ತವ್ಯದಿಂದ ಮರಳುತ್ತಿದ್ದಂತೆ ಹಣ ಪಾವತಿಗೆ ವ್ಯವಸ್ಥೆ ಮಾಡುವ ಭರವಸೆಯನ್ನು ಭೂಮಾಲೀಕರಿಗೆ ನೀಡಿದ್ದಾರೆ.

ಜಪ್ತಿ ತಪ್ಪಿಸಲು ಪ್ರಯತ್ನ!

ಸಹಾಯಕ ಆಯುಕ್ತರ ಕಚೇರಿಯ ಚರ ಸ್ವತ್ತುಗಳಾದ ಕಂಪ್ಯೂಟರ್‌ಗಳು, ಟೇಬಲ್, ಕುರ್ಚಿಗಳು ಹಾಗೂ ಸಹಾಯಕ ಆಯುಕ್ತರ ವಾಹನವನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶ ಹೊರಡಿಸಿದ್ದು, ಇದಕ್ಕೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತರುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನವನ್ನು ಮಾಡಿದ್ದರು. ಆದರೆ ಗುರುವಾರ ಬೆಳಗ್ಗೆಯೂ ಪ್ರಯತ್ನ ಮಾಡಿ ವಿಫಲವಾಗಿ, ಬಾಂಡ್ ನೀಡುವ ಭರವಸೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net