

ಮುಂಡಗೋಡ: ಬಸವನಗರ ಸರ್ಕಾರಿ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್. ಅವರು ಗುರುವಾರ ಗಣಿತ ಪಾಠ ಮಾಡಿದರು.
ತಹಸೀಲ್ದಾರ್ ಶಂಕರ ಗೌಡಿ ಮತ್ತಿತರ ಸಿಬ್ಬಂದಿಯೊಂದಿಗೆ ಮತಗಟ್ಟೆ ಪರಿಶೀಲನೆಗಾಗಿ ಬಸವನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ಏಳನೇ ತರಗತಿಯಲ್ಲಿ ನಾಲ್ವರು ವಿದ್ಯಾರ್ಥಿನಿಯರಿಗೆ ಶಿಕ್ಷಕ ಪಾಠ ಮಾಡುವುದನ್ನು ಕಂಡು ಉಳಿದ ವಿದ್ಯಾರ್ಥಿಗಳ ಬಗ್ಗೆ ವಿಚಾರಿಸಿದರು. ಆಟವಾಡಲು ಹೋಗಿದ್ದಾರೆ ಎಂದು ಒಬ್ಬರು ಹೇಳಿದರೆ, ಕೈ ತೊಳೆಯಲು ಹೋಗಿದ್ದಾರೆ ಎಂದು ಮತ್ತೊಬ್ಬ ಶಿಕ್ಷಕರು ಹೇಳಿದರು. ಊಟ ಮಾಡಿದ ನಂತರ ಆಟವಾಡಲು ಯಾಕೆ ಕಳುಹಿಸುತ್ತೀರಿ? ಎಂದು ಪ್ರಶ್ನಿಸಿದ ದೇವರಾಜ ಅವರು ಹಾಜರಾತಿ ಪುಸ್ತಕ ಪರಿಶೀಲಿಸಿದರು.
ಕಳೆದ ಒಂದೂವರೆ ತಿಂಗಳಿಂದ ಇಬ್ಬರು ವಿದ್ಯಾರ್ಥಿಗಳು ಗೈರು ಹಾಜರಾಗಿರುವುದನ್ನು ಕಂಡು ಮುಖ್ಯಾಧ್ಯಾಪಕಿಯನ್ನು ತರಾಟೆಗೆ ತೆಗೆದುಕೊಂಡರು. 40 ದಿನಗಳಿಂದ ವಿದ್ಯಾರ್ಥಿಗಳು ಗೈರು ಹಾಜರಿದ್ದಾರೆ. ಮಕ್ಕಳ ಮನೆಗೆ ಭೇಟಿ ನೀಡಿ ವಿಚಾರಿಸಿದ್ದೀರಾ? ಶಾಲೆಗೆ ಬರಲು ಹೇಳಿದ್ದೀರಾ? ಎಷ್ಟು ಸಾರಿ ಮಕ್ಕಳನ್ನು ಭೇಟಿಯಾಗಿ ಶಾಲೆಗೆ ಕರೆದಿದ್ದೀರಿ ? ಎಂದು ಪ್ರಶ್ನಿಸಿದರು.
ನಂತರ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡಿ ಕೆಲ ಪ್ರಶ್ನೆಗಳನ್ನು ಕೇಳಿದರು. ಆದರೆ, ವಿದ್ಯಾರ್ಥಿಗಳಿಂದ ಉತ್ತರ ಬರಲಿಲ್ಲ. ನಿನ್ನ ವಯಸ್ಸು ಎಷ್ಟು ? ಎಂದು ಇಂಗ್ಲಿಷ್‌ನಲ್ಲಿ ಪ್ರಶ್ನಿಸಿದಾಗ ವಿದ್ಯಾರ್ಥಿಗಳಿಂದ ಸಮರ್ಪಕ ಉತ್ತರ ನೀಡದಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು.
ಕೆಲ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡದಿರುವುದರಿಂದ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಾರೆ.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಹಾಗೂ ಶಾಲೆಯನ್ನು ಸ್ವಚ್ಛವಾಗಿಟ್ಟುಕೋಳ್ಳಬೇಕು. ಮತ್ತೊಂದು ಬಾರಿ ಶಾಲೆಯ ಮತಗಟ್ಟೆ ವೀಕ್ಷಣೆಗೆ ಭೇಟಿ ನೀಡಿದಾಗ ಇದೆ ರೀತಿ ಕಂಡು ಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.