ಹಿನ್ನೀರಿನಲ್ಲಿ ಸಮೃದ್ಧ ಜಲ

Btw_Backwater
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ತಾಲೂಕಿನಾದ್ಯಂತ ಮೈಯೊಡ್ಡಿ ಹರಿಯುವ ಜಿಲ್ಲೆಯ ಜೀವನದಿ ನೇತ್ರಾವತಿ ಈ ವರ್ಷ ಒಡಲಲ್ಲಿ ಹಿನ್ನೀರು ತುಂಬಿಕೊಂಡು ಜಲ ಸಮೃದ್ಧಳಾಗಿದ್ದಾಳೆ. ಬೇಸಿಗೆಯಲ್ಲಿ ಮಂಗಳೂರು ಸೇರಿದಂತೆ ತಾಲೂಕಿನ ಪುರಸಭೆ, ಗ್ರಾಮೀಣ ಭಾಗದಲ್ಲಿ ನೀರಿನ ಕೊರತೆ ಬಾಧಿಸದು ಎನ್ನುವ ವಿಶ್ವಾಸ ಮೂಡಿಸಿದೆ. ನದಿ ಕಿನಾರೆಯಲ್ಲಿರುವ ಗ್ರಾಮಗಳ ಬಾವಿ, ಕೆರೆ, ತೊರೆ, ಕೊಳವೆ ಬಾವಿಗಳಲ್ಲೂ ಅಂತರ್ಜಲ ಹೆಚ್ಚಿದ್ದು ನದಿ ನದಿತೀರದ ಕೃಷಿಕರಲ್ಲಿ ಉತ್ಸಾಹ ಮೂಡಿಸಿದೆ.

ನೇತ್ರಾವತಿಯಲ್ಲಿ ನಿರ್ಮಾಣಗೊಂಡಿರುವ ಕಿಂಡಿ ಅಣೆಕಟ್ಟಿನಿಂದ ಈ ವರ್ಷ ಅಪಾರ ನೀರಿನ ಸಂಗ್ರಹವಿದೆ. ತುಂಬೆ ವೆಂಟೆಡ್ ಡ್ಯಾಂ, ಶಂಭೂರಿನಲ್ಲಿರುವ ಎಎಂಆರ್ ವಿದ್ಯುತ್ ಉತ್ಪಾದನಾ ಕಂಪನಿ ಡ್ಯಾಂ ನೀರಿಗೆ ವರದಾನವಾಗಿತ್ತು. ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಾ ಬಂದಾಗ ಮೇಲ್ಭಾಗದಲ್ಲಿರುವ ಶಂಭೂರು ಡ್ಯಾಂನಲ್ಲಿ ಸಂಗ್ರಹಿಸಿಟ್ಟಿರುವ ನೀರು ಬಳಸಿಕೊಳ್ಳಲಾಗುತ್ತಿತ್ತು. ಈ ಬಾರಿ ಎರಡು ಡ್ಯಾಂಗಳ ಮಧ್ಯೆ ಜಕ್ರಿಬೆಟ್ಟುವಿನಲ್ಲಿ ಹೊಸ ಡ್ಯಾಂ ನಿರ್ಮಾಣಗೊಂಡು ನೀರು ಸಂಗ್ರಹ ಆರಂಭಗೊಂಡಿರುವುದರಿಂದ ನೀರಿನ ಸಮಸ್ಯೆ ಕಾಡದು ಎನ್ನುವ ಭರವಸೆ ಮೂಡಿದೆ. ತಾಲೂಕಿನ ಹೆಚ್ಚಿನ ಗ್ರಾಮಗಳು ನದಿಯ ಇಕ್ಕೆಲದಲ್ಲಿದೆ. ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ನದಿ ನೀರು ಸರಬರಾಜಾಗುತ್ತದೆ. ಬಂಟ್ವಾಳ ಪುರಸಭೆಗೆ ನೀರು ಪೂರೈಸುವ ಎರಡು ಜಾಕ್‌ವೆಲ್‌ಗಳು ಹೊಸದಾಗಿ ನಿರ್ಮಾಣಗೊಂಡ ಜಕ್ರಿಬೆಟ್ಟು ಅಣೆಕಟ್ಟಿನ ಒಳಭಾಗದಲ್ಲಿರುವುದರಿಂದ ಪುರಸಭೆ ವ್ಯಾಪ್ತಿಯ ಜನರಿಗೆ ನೀರು ಲಭ್ಯವಾಗಲಿದೆ. ಮಂಗಳೂರು ನಗರಕ್ಕೆ ನೀರು ಸರಬರಾಜಾಗುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರು ಕ್ಷೀಣಿಸಿದರೆ ಮೇಲ್ಭಾಗದಲ್ಲಿ ಎರಡು ಡ್ಯಾಂಗಳಲ್ಲಿ ನೀರು ಸಂಗ್ರಹವಿರುತ್ತದೆ. ಅಡ್ಯಾರ್‌ನಲ್ಲಿ ನಿರ್ಮಾಣಗೊಂಡ ಡ್ಯಾಂನಿಂದ ತುಂಬೆ, ಫರಂಗಿಪೇಟೆ ಭಾಗದಲ್ಲಿ ಹಿನ್ನಿರು ತುಂಬಿಕೊಂಡಿದ್ದು, ನೇತ್ರಾವತಿ ನದಿ ಇದ್ದರೂ ಇಷ್ಟು ವರ್ಷಗಳ ಕಾಲ ಬಂಟ್ವಾಳ ತಾಲೂಕು ಜನರ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಜಕ್ರಿಬೆಟ್ಟು ಡ್ಯಾಂನಲ್ಲಿ ನೀರಿನ ಸಂಗ್ರಹ

ಜಕ್ರಿಬೆಟ್ಟುವಿನಲ್ಲಿ ನಿರ್ಮಾಣಗೊಂಡಿರುವ ಹೊಸ ವೆಂಟೆಡ್ ಡ್ಯಾಂನಲ್ಲಿ ನೀರಿನ ಸಂಗ್ರಹ ಆರಂಭಗೊಂಡಿದೆ. 5.50 ಮೀ. ಎತ್ತರದ ಕಿಂಡಿ ಅಣೆಕಟ್ಟಿನಲ್ಲಿ ಸೋಮವಾರ ಸಂಜೆ 2.7 ಮೀ. ನೀರು ಸಂಗ್ರಹಗೊಂಡಿತ್ತು. 351.25 ಮೀ. ಉದ್ದ, 21 ಕಿಂಡಿ, 12 ಮೀ. ಅಗಲದ ವರ್ಟಿಕಲ್ ಲಿಫ್ಟ್ ಗೇಟ್, ಮಧ್ಯದಲ್ಲಿ ಎರಡು ಸ್ಕವರ್ ಸ್ಲೂಯಿಸ್ ಗೇಟ್‌ಗಳಿರುವ ಡ್ಯಾಂನಲ್ಲಿ ಎಲ್ಲಾ ಗೇಟ್ ಅಳವಡಿಸಿದರೆ 166 ಎಂಸಿಎಫ್‌ಟಿ ನೀರು ಸಂಗ್ರಹಣೆಗೊಳ್ಳಲಿದೆ.

ನೀರಿನ ಸದ್ಬಳಕೆ ಅಗತ್ಯ

ಬಂಟ್ವಾಳದ ನೇತ್ರಾವತಿ ನದಿಯಿಂದ ಮಂಗಳೂರು ನಗರದ ದೊಡ್ಡ ಕೈಗಾರಿಕೆಗೆ ನೀರು ಪೂರೈಕೆಯಾಗುತ್ತಿದೆ. ಬೃಹತ್ ಕಟ್ಟಡ ನಿರ್ಮಾಣ ಕಾಮಗಾರಿಗೂ ನದಿ ನೀರು ಉಪಯೋಗಿಸಲಾಗುತ್ತಿದೆ. ನದಿಯಲ್ಲಿ ಬೇಕಾದಷ್ಟು ನೀರಿದೆ ಎಂದು ದುಂದು ವೆಚ್ಚ ಮಾಡದೆ ಸಮರ್ಪಕವಾಗಿ ಬಳಸಿಕೊಂಡರೆ ಮುಂದಿನ ಮಳೆಗಾಲದವರೆಗೂ ನೀರು ಲಭ್ಯತೆ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net