

ವಿಜಯವಾಣಿ ಸುದ್ದಿಜಾಲ ಕೋಟ
ಬೆಣ್ಣೆಕುದ್ರು ಹೊಳೆಗೆ ಅಡ್ಡಲಾಗಿ ನಿರ್ಮಾಣಗೊಳ್ಳುತ್ತಿರುವ ವೆಂಟೆಡ್ ಡ್ಯಾಂನಿಂದ ಐರೋಡಿ ಗ್ರಾಮ ಪಂಚಾಯಿತಿ ವಿವಿಧ ಭಾಗಗಳ ಸಾಕಷ್ಟು ಕೃಷಿಭೂಮಿ, ಮನೆಗಳು ಮುಳುಗಡೆಯಾಗುವ ಭೀತಿ ಇದ್ದು, ವಾರ್ಡ್ ಸಭೆಯಲ್ಲೂ ಪ್ರಾಸ್ತಾಪಿಸಲಾಗಿದೆ. ವಿಶೇಷ ಗ್ರಾಮ ಸಭೆ ನಡೆಸಿ ಅಧಿಕಾರಿಗಳ ಮೂಲಕವೇ ಸಮಸ್ಯೆಗಳು ಬಗೆಹರಿಸಬೇಕೆಂದು ಐರೋಡಿ ವಿಠ್ಠಲ್ ಪೂಜಾರಿ ಹಾಗೂ ರಾಘವೇಂದ್ರ ಒತ್ತಾಯಿಸಿದರು.
ಹಂಗಾರಕಟ್ಟೆ ದೂಳಂಗಡಿ ಶಾಲಾ ಸಭಾಂಗಣದಲ್ಲಿ ಬುಧವಾರ ಐರೋಡಿ ಗ್ರಾಮ ಪಂಚಾಯಿತಿ ಪ್ರಥಮ ಗ್ರಾಮ ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಅವರು, ಅಧಿಕಾರಿಗಳ ಗೈರುಹಾಜರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಕ್ರಿಯಿಸಿದ ಪಿಡಿಒ ಉಮಾಶಂಕರ್ ಗ್ರಾಮಸಭೆಗೆ ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳ ಗೈರಿನ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು.
ಐರೋಡಿ ವ್ಯಾಪ್ತಿಯಲ್ಲಿರುವ ರಾಜಕಾಲುವೆಯ ಹೂಳೆತ್ತಲು ಹಾಗೂ ಇಲ್ಲಿನ ಉಪ್ಪು ನೀರಿನ ಹೊಳೆಯಲ್ಲಿರುವ ಕಾಂಡ್ಲಾ ವನಗಳಿಂದ ಕೃಷಿ ಭೂಮಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸಮುದ್ರ ತೀರದಲ್ಲಿ ಬೆಳೆಸಬೇಕಾದ ಕಾಂಡ್ಲವನವನ್ನು ಹೊಳೆಗಳಲ್ಲಿ ಹಾಕಲಾಗಿದೆ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಐರೋಡಿ ಸುರೇಶ್ ಕುಂದರ್ ಒತ್ತಾಯಿಸಿದರು.
ಐರೋಡಿ ವಿಠ್ಠಲ್ ಪೂಜಾರಿ ಮಾತನಾಡಿ ಗ್ರಾಮಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಬೇಕು. ಇದಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುತುವರ್ಜಿವಹಿಸಬೇಕು. ಗ್ರಾಮದ ಸಮಸ್ಯೆಗಳನ್ನು ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಆಲಿಸಬೇಕು. ಆದರೆ ಅಧಿಕಾರಿಗಳ ಅನುಪಸ್ಥಿತಿ ಎದ್ದು ಕಾಣಿತ್ತಿದೆ. ಅಂತಹ ಅಧಿಕಾರಿಗಳ ಕ್ರಮಕ್ಕೆ ಸಭೆ ನಿರ್ಣಯ ಕೈಗೊಳ್ಳಿ ಎಂದು ಸೂಚಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಕು ಅಧ್ಯಕ್ಷತೆ ವಹಿಸಿದ್ದರು. ಸಿಬ್ಬಂದಿ ಪೂರ್ಣಿಮಾ ವರದಿ ವಾಚಿಸಿದರು. ಕಾರ್ಯದರ್ಶಿ ವಿಜಯ ಭಂಡಾರಿ ನಿರೂಪಿಸಿದರು.
ನೀರಿನ ಬಿಲ್ ಅಧಿಕ ವಸೂಲಾತಿ ಕುರಿತು ಗ್ರಾಮದ ಮಹಿಳೆಯರು ಆಕ್ಷೇಪ ಎತ್ತಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ವಾರಾಹಿ ನೀರು ಬರುವುದಕ್ಕಿಂತ ಮೊದಲೇ ಜಲಜೀವನ್ ಹೆಸರಿನಲ್ಲಿ ಮೀಟರ್ ದಂಧೆ ಪ್ರಾರಂಭಗೊಂಡಿದೆ. ತಿಂಗಳಿಗೆ 400 ರೂ.ಗೂ ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ. ಬಡವರಿಗೆ, ಮಧ್ಯಮ ವರ್ಗದವರಿಗೆ ಇದು ದೊಡ್ಡ ಹೊರೆಯಾಗಿದೆ. ಹಿಂದಿನ ದರವೇ ಜಾರಿಗೊಳಿಸಿ ಎಂದು ಆಗ್ರಹಿಸಿದರು. ಈ ಸಂದರ್ಭ ಪಿಡಿಒ ಮತ್ತು ಗ್ರಾಮಸ್ಥರ ನಡುವೆ ವಾಕ್ ಸಮರ ನಡೆಯಿತು.
ರಸ್ತೆ ಕಾಮಗಾರಿಗಳಲ್ಲಿ ಲೋಪ ಹಾಗೂ ನಿರ್ಲಕ್ಷೃ ವಹಿಸಿರುವುದರ ಕುರಿತು ನೋಡಲ್ ಅಧಿಕಾರಿ ಪಂಚಾಯತ್‌ರಾಜ್ ಇಂಜಿನಿಯರ್ ಶ್ರೀನಾಥ್ ತರಾಟೆಗೆ ತೆಗೆದುಕೊಂಡರು. ಬಳಿಕ ಮನವಿಗಳನ್ನು ಸ್ವೀಕರಿಸಲಾಯಿತು. ಹಾಜರಾಗಿದ್ದ ಬೆರಳೆಣಿಕೆಯ ಅಧಿಕಾರಿಗಳು ತಮ್ಮ ಇಲಾಖೆಗಳ ಕುರಿತು ಮಾಹಿತಿ ನೀಡಿದರು. ಸುರೇಶ ಕುಂದರ್ ಹಾಗೂ ಗ್ರಾಮಸ್ಥ ರಾಮ ದಂಡೆಬೆಟ್ಟು, ಮಂಜುನಾಥ್ ಬಾಳ್ಕುದ್ರು ಮಾತನಾಡಿದರು.
ಕೋಟ ಠಾಣೆಯಲ್ಲಿ ಪದೇಪದೆ ಅಧಿಕಾರಿಗಳ ವರ್ಗಾವಣೆ ನಡೆಸುವ ಕುರಿತು ಗ್ರಾಮ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದ್ದು, ಗ್ರಾಮದಲ್ಲಿ ಡ್ರಗ್ಸ್, ಗಾಂಜಾ ಪ್ರಸರಣ ನಿರಂತರ ನಡೆಯುತ್ತಿದೆ. ನಡುರಾತ್ರಿ ಮನೆಯ ಬಾಗಿಲು ತಟ್ಟಿ ಭಯ ಹುಟ್ಟಿಸುವ ಪ್ರಸಂಗಗಳು ಎದುರಾಗಿವೆ. ಪೊಲೀಸ್ ಇಲಾಖೆಯ ಗಸ್ತು ಬಲಹೀನವಾಗಿದೆ ಎಂದು ಗ್ರಾಮಸ್ಥರು ಕುಟುಕಿದರು. ಕೋಟ ಠಾಣಾ ಎಎಸ್‌ಐ ಜಯಪ್ರಕಾಶ್ ಉತ್ತರಿಸಿ, ಜನರ ರಕ್ಷಣೆಗೆ ಪೋಲಿಸ್ ಇಲಾಖೆ ಸದಾ ಕಾರ್ಯನಿರ್ವಹಿಸುತ್ತಿದೆ ಅನುಮಾನಸ್ಪದ ವಿಚಾರಗಳಿದ್ದರೆ ಠಾಣೆಗೆ ಮಾಹಿತಿ ನೀಡಿ ಎಂದರು.
ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ವ್ಯವಹರಿಸಲು ಗೊತ್ತಿಲ್ಲದವರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಕನ್ನಡ ಮಾತನಾಡುವವರೇ ಇದ್ದು, ಅನ್ಯಭಾಷೆಗಳ ತಿಳಿವಳಿಕೆ ಬಹುತೇಕರಿಗೆ ಇಲ್ಲ. ಕನ್ನಡ ಭಾಷೆ ತಿಳಿದ ಅಧಿಕಾರಿಗಳು ಬ್ಯಾಂಕ್‌ಗಳಿಗೆ ನೇಮಕವಾಗುವಂತೆ ಗ್ರಾಪಂ ಒತ್ತಾಯಿಸಬೇಕು ಎಂದು ಮಂಜುನಾಥ್ ಬಾಳ್ಕುದ್ರ ಒತ್ತಾಯಿಸಿದರು.