ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಬಂಧನ

mng--1 July Mohammad musthaffa
Published on

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ವಿಜಯ ಸನ್ನಿದಿ ಬಳಿ 2020ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಿಂದ ಜಾಮೀನು ರದ್ದಾಗಿದ್ದರೂ, ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮೂಲ್ಕಿ ತಾಲೂಕಿ ಕೆಮ್ರಾಲ್ ಪಕ್ಷಿಕೆರೆ ನಿವಾಸಿ ಮೊಹಮ್ಮದ್ ಮುಸ್ತಾ ಯಾನೇ ಮುಸ್ತಾ ಬಂಧಿತ ಆರೋಪಿ. 2020ರ ಜೂ.5ರಂದು ಮೂಲ್ಕಿ ವಿಜಯ ಸನ್ನಿದಿ ಬಳಿ ಹಾಡಹಗಲಿನಲ್ಲಿ ರಸ್ತೆಯಲ್ಲಿ ಅಬ್ದುಲ್ ಲತ್ೀ ಎಂಬವರನ್ನು ಆರೋಪಿಗಳಾದ ದಾವೂದ್ ಹಕೀಂ, ಮೊಹಮ್ಮದ್ ಮುಸ್ತಾ ಮತ್ತು ಇತರ 10 ಜನ ಸೇರಿ ಕೊಲೆ ಮಾಡಿದ್ದರು. ಎಲ್ಲ ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.

ಈ ಪೈಕಿ ಮುಸ್ತಾ 2020ರ ಅ.19ರಂದು ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದ. ಆದರೆ 2022ರ ಎ.22ರಂದು ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗಿತ್ತು. ಅಂದಿನಿಂದ ಆರೋಪಿ ಮೊಹಮ್ಮದ್ ಮುಸ್ತಾ ತಲೆಮರೆಸಿಕೊಂಡಿದ್ದ. ಬಳಿಕ ನಕಲಿ ಪಾಸ್‌ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದ. ತಲೆಮರೆಸಿಕೊಂಡಿದ್ದ ಆತನ ಪತ್ತಗೆ ವಿಶೇಷ ತಂಡವನ್ನು ರಚಿಸಲಾಗಿತ್ತು.

ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆತ ಮೂಲ್ಕಿಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಜೂ. 30ರಂದು ಮೂಲ್ಕಿಯ ಪಕ್ಷಿಕೆರೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಮುಂದಿನ ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

ಈತನ ವಿರುದ್ದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬಗ್ಗೆ ಮತ್ತು ವಿದೇಶ ಮತ್ತು ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವ ಪ್ರಕರಣವನ್ನು ಮೂಲ್ಕಿ ಠಾಣೆಯಲ್ಲಿ ದಾಖಲಿಸಲಾಗಿತ್ತು. ವಿಚಾರಣೆಯಲ್ಲಿ ಈತನ ನಕಲಿ ಪಾಸ್‌ಪೋರ್ಟ್ ಪಡೆದು ಓಮನ್ ರಾಷ್ಟ್ರಕ್ಕೆ ಪರಾರಿಯಾಗಿ ಅನಂತರ 2024ರಲ್ಲಿ ನೇಪಾಳ ಮೂಲಕ ಭಾರತ ದೇಶಕ್ಕೆ ಬಂದಿರುವುದಾಗಿ ತಿಳಿಸಿದ್ದಾನೆ.

ನಕಲಿ ಪಾಸ್‌ಪೋರ್ಟ್ ಹೊಂದಿರುವ ಬಗ್ಗೆ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ 4 ಮತ್ತು ಇತರೆ ಜಿಲ್ಲೆಯಲ್ಲಿ ಒಟ್ಟು 5 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ಠಾಣೆಗಳಲ್ಲಿ ಈತನ ವಿರುದ್ದ ಎರಡು ಪ್ರಕರಣಗಳಲ್ಲಿ ವಾರಂಟು ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net