ಶಾಲೆ ಅಭಿವೃದ್ಧಿಗೆ ಭೂದಾನಿಗಳ ಕೊಡುಗೆ ಅಪಾರ

ABBAYYA NEW
Published on

ಹುಬ್ಬಳ್ಳಿ : ಪೂರ್ವ ವಿಧಾನಸಭಾ ಕ್ಷೇತ್ರದಲ್ಲೇ ಅತ್ಯುತ್ತಮ ಕನ್ನಡ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆರ್.ಕೆ. ಪಾಟೀಲ ಶಾಲೆಯ ಶ್ರೇಯಸ್ಸಿಗೆ ಶಾಲೆಯ ಭೂದಾನಿಗಳೇ ಪ್ರಮುಖ ಕಾರಣ. ವಿದ್ಯಾರ್ಜನೆಗಾಗಿ ಭೂಮಿದಾನ ಮಾಡುವ ಮೂಲಕ ಈ ಭಾಗದ ಅಸಂಖ್ಯಾತ ಮಕ್ಕಳ ಬಾಳಲ್ಲಿ ನಂದಾ ದೀಪವಾಗಿದ್ದಾರೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಪ್ರಶಂಸೆ ವ್ಯಕ್ತಪಡಿಸಿದರು.

ಇಲ್ಲಿನ ವಾರ್ಡ್ ಸಂಖ್ಯೆ 82ರ ಬಿಡನಾಳದ ಆರ್.ಕೆ. ಪಾಟೀಲ ಶಾಲೆಯಲ್ಲಿ ಎರಡು ನೂತನ ಕೊಠಡಿಗಳನ್ನು ಲೋಕಾರ್ಪಣೆ ಮಾಡಿ ಮತ್ತು ಎರಡು ಹೊಸ ಕೊಠಡಿ ನಿರ್ವಣಕ್ಕೆ ಸೋಮವಾರದಂದು ಭೂಮಿ ಪೂಜೆ ನೆರವೇರಿಸಿ, ಅವರು ಮಾತನಾಡಿದರು.

ಈಗಾಗಲೇ ಈ ಶಾಲೆ ಆವರಣದಲ್ಲಿ ಕಾಲೇಜಿಗೆ ಅವಶ್ಯವಿರುವ ದೂರದೃಷ್ಟಿಯಿಂದ ಕಟ್ಟಡ ಸಹಿತಿ ಅನೇಕ ಸೌಲಭ್ಯ ಒದಗಿಸಲಾಗುತ್ತಿದೆ. ಕಟ್ಟಡ ಕಾಮಗಾರಿ ಪೂರ್ಣಗೊಳಿಸಿದ ಕೂಡಲೇ ಕಾಲೇಜು ಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಿಡನಾಳ ಬಳಿಯ ಲಕ್ಷ್ಮೀ ನಗರದಲ್ಲಿ 33ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕರು ಚಾಲನೆ ನೀಡಿ, ಸ್ಥಳೀಯರ ಸಮಸ್ಯೆ ಆಲಿಸಿದರು. ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂಧಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆ ಮಾಜಿ ಸದಸ್ಯರಾದ ಮೋಹನ ಅಸುಂಡಿ, ವಿಜನಗೌಡ ಪಾಟೀಲ, ಯಮನೂರ ಜಾಧವ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ, ಲೋಕೋಪಯೋಗಿ ಇಲಾಖೆಯ ವಿಜಯ ಕುಮಾರ, ಎಸ್.ಡಿ.ಎಂ.ಸಿ ಗೌರವ ಅಧ್ಯಕ್ಷರು ಜಮಾಲ್​ಸಾಬ್ ನದಾಫ್, ಉಪಾಧ್ಯಕ್ಷೆ ಗೀತಾ ಪಾಟೀಲ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net