

ಹರಿಪ್ರಸಾದ್ ನಂದಳಿಕೆ ಕಾರ್ಕಳ
ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಹೊಂಡ ನಿರ್ಮಾಣಗೊಂಡಿದ್ದು, ಹೊಂಡದಲ್ಲಿ ನಿಂತ ಕೆಸರು ನೀರಿಂದ ಸ್ಥಳೀಯ ನಿವಾಸಿಗಳಿಗೆ ಹಾಗೂ ಈ ಭಾಗದ ರಸ್ತೆಯಲ್ಲಿ ಸಂಚಾರ ನಡೆಸುವ ಮಂದಿಗೆ ನಿತ್ಯ ಕಿರಿಕಿರಿಯುಂಟು ಮಾಡುತ್ತಿದೆ.
ನಂದಳಿಕೆ, ಬೆಳ್ಮಣ್ ಹಾಗೂ ಬೋಳ ಈ ಮೂರು ಗ್ರಾಮದ ಜನರಿಗೆ ಉಪಯೋಗಕ್ಕೆ ಬರುವ ನಂದಳಿಕೆ ಗ್ರಾಪಂ ವ್ಯಾಪ್ತಿಯ ಅಬ್ಬನಡ್ಕ ರಸ್ತೆ ತೀರ ಹದಗೆಟ್ಟಿದ್ದು ವಾಹನ ಸಂಚಾರ ತೊಂದರೆಯಾಗಿದೆ. ಹೊಂಡದ ಅರಿವಿಲ್ಲದೆ ದ್ವಿಚಕ್ರ ವಾಹನ ಸವಾರರು ಎಡವಟ್ಟು ಮಾಡಿಕೊಳ್ಳುತ್ತಿರುವುದು ಇಲ್ಲಿ ಮಾಮೂಲು. ಮಳೆ ನೀರು ರಸ್ತೆಯಲ್ಲೇ ಶೇಖರಣೆಯಾಗುತ್ತಿದ್ದ ಹಿನ್ನೆಲೆಯಲ್ಲಿ ನೀರು ಹರಿದು ಹೋಗಲು ಮೋರಿ ನಿರ್ಮಿಸಿದ್ದು ಬಳಿಕ ಇಡೀ ರಸ್ತೆ ಹದಗೆಟ್ಟಿದೆ.
ಕೆದಿಂಜೆಯಿಂದ ಸಂಪರ್ಕ ಪಡೆದು ಅಬ್ಬನಡ್ಕ ಮೂಲಕ ಹಾದು ಹೋಗುವ ಈ ರಸ್ತೆ ಬೆಳ್ಮಣ್ ಇತಿಹಾಸ ಪ್ರಸಿದ್ಧ ದೇಗುಲ ಸಂಪರ್ಕ ಸಾಧಿಸಲು ಹಾಗೂ ಬೋಳ ಕೋಡಿ, ಸಚ್ಚೇರಿಪೇಟೆ, ಮುಂಡ್ಕೂರು, ಜಾರಿಗೆಕಟ್ಟೆ ಸಂಪರ್ಕ ರಸ್ತೆಯಾಗಿದ್ದು ನಿತ್ಯ ಇದೇ ರಸ್ತೆ ಅವಲಂಬಿಸಿ ವಾಹನ ಸವಾರರು ಸಾಗುತ್ತಾರೆ. ಈಗಾಗಲೇ ಈ ರಸ್ತೆ ಸರಿಪಡಿಸಲು ಇಲ್ಲಿನ ನಿವಾಸಿಗಳು ಜನಪ್ರತಿನಿಧಿಗಳ ಹಾಗೂ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದರೂ ರಸ್ತೆಗೆ ತೇಪೆ ಹಾಕುವ ಕಾರ್ಯವೂ ನಡೆದಿಲ್ಲ.
ಇತ್ತೀಚಿನ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಯುದ್ದಕ್ಕೂ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳಲ್ಲಿ ನಿಂತ ಕೆಸರು ನೀರು ವಾಹನ ಓಡಾಡುವ ಸಂದರ್ಭ ಸ್ಥಳೀಯ ನಿವಾಸಿಗಳ ಮನೆಯಂಗಳಕ್ಕೆ ಹಾಗೂ ದಾರಿಹೋಕರಿಗೆ ಮತ್ತು ನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಮೈ ಮೇಲೆ ಅಭಿಷೇಕವಾಗುತ್ತಿದೆ. ಕೆಸರು ನೀರಿನಲ್ಲೇ ಜನ ಅತ್ತಿತ್ತ ಸಾಗಬೇಕಾಗಿದ್ದು, ಇದು ರಸ್ತೆಯೋ ಅಥವಾ ಗದ್ದೆಯೋ ಎನ್ನುವ ಸ್ಥಿತಿಯಿದೆ.
ಇಲ್ಲಿನ ರಸ್ತೆಯುದ್ದಕ್ಕೂ ಎಲ್ಲೂ ಚರಂಡಿ ವ್ಯವಸ್ಥೆಗಳಿಲ್ಲದೆ ಪ್ರತಿ ಮಳೆಗಾಲದ ಸಂದರ್ಭದಲ್ಲಿ ಸ್ವಲ್ಪ ಮಳೆ ಬಂದರೂ ಸಾಕು ರಸ್ತೆಯಲ್ಲೇ ಕೆಸರು ನೀರು ಶೇಖರಣೆಯಾಗುತ್ತದೆ. ಗಡಿಭಾಗದ ಸಮಸ್ಯೆಯಿಂದ ಯಾವ ಪಂಚಾಯಿತಿಗಳೂ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ರಸ್ತೆ ಸರಿಪಡಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದು ಗ್ರಾಮಸ್ಥರ ಒತ್ತಾಯ.
ರಸ್ತೆಯುದ್ದಕ್ಕೂ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡ ನಿರ್ಮಾಣವಾಗಿ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೂ ನಿತ್ಯ ತೊಂದರೆಯಾಗುತ್ತಿದೆ. ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಇಲ್ಲಿನ ರಸ್ತೆಗೆ ತೇಪೆ ಹಾಕುವಲ್ಲಿಯೂ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. -ಸಂದೇಶ್, ಗ್ರಾಮಸ್ಥರು ಕೆಸರು ತುಂಬಿದ ರಸ್ತೆಯಲ್ಲೇ ನಾವು ನಿತ್ಯ ಸಾಗಬೇಕಾಗಿದ್ದು ವಾಹನಗಳು ಓಡಾಡುವ ಸಂದರ್ಭದಲ್ಲಿ ಮೈ ಮೇಲೆ ಕೆಸರು ನೀರಿನ ಅಭಿಷೇಕವಾಗುತ್ತದೆ. ಎಷ್ಟೋ ಬಾರಿ ಬಟ್ಟೆಗಳಿಗೆ ಕೆಸರು ತಾಗಿದ ಹಿನ್ನೆಲೆಯಲ್ಲಿ ಮತ್ತೆ ಮನೆಗೆ ವಾಪಸ್ ಹೋದ ನಿದರ್ಶನವೂ ಇಲ್ಲಿದೆ. -ಪ್ರಣೀತ್, ವಿದ್ಯಾರ್ಥಿ https://www.vijayavani.net/negligence-of-officials-harms-farmers-farming https://www.vijayavani.net/koraga-culture-unveiled