ಪರಿಸರಕ್ಕೆ ಮಾರಕವಾದ ಯೋಜನೆ ಕೈಬಿಡಿ

8sgr2
ಸಾಗರದಲ್ಲಿ ವೃಕ್ಷಲಕ್ಷ ಆಂದೋಲನದ ನಿಯೋಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರನ್ನು ಭೇಟಿ ಮಾಡಿ ಪರಿಸರಕ್ಕೆ ಮಾರಕವಾಗುವ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿತು. ಅನಂತ ಹೆಗಡೆ ಅಶೀಸರ, ವೆಂಕಟೇಶ್ ಕವಲಕೋಡು, ಅನಂತರಾಮು ಇತರರಿದ್ದರು.
Published on

ಸಾಗರ: ರಾಜ್ಯ ಸರ್ಕಾರದ ಕರ್ನಾಟಕ ವಿದ್ಯುತ್ ನಿಗಮ ಶರಾವತಿ ಕಣಿವೆಯಲ್ಲಿ ಬೃಹತ್ ಜಲ ವಿದ್ಯುತ್ ಯೋಜನೆ ಜಾರಿಗೊಳಿಸಲು ತಯಾರಿ ನಡೆಸಿದ್ದು, ಪರಿಸರಕ್ಕೆ ಮಾರಕವಾಗಿರುವ ಈ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ವೃಕ್ಷಲಕ್ಷ ಆಂದೋಲನ ನಿಯೋಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಬುಧವಾರ ಸಾಗರದಲ್ಲಿ ಮನವಿ ಸಲ್ಲಿಸಿತು.
ಪಶ್ಚಿಮಘಟ್ಟದ ಹೃದಯ ಭಾಗವಾಗಿರುವ ಶರಾವತಿ ಕಣಿವೆಯಲ್ಲಿ 2000 ಮೆಗಾ ವ್ಯಾಟ್ ಸಾಮರ್ಥ್ಯದ ಬೃಹತ್ ಭೂಗತ್ ಜಲವಿದ್ಯುತ್ ಯೋಜನೆ ಜಾರಿಗೆ ಸರ್ಕಾರ ಮತ್ತು ವಿದ್ಯುತ್ ನಿಗಮ ಮುಂದಾಗಿದೆ. ಅರಣ್ಯ, ವನ್ಯಜೀವಿ, ಪರಿಸರ ಇಲಾಖೆಗಳ ಪರವಾನಗಿ ಪಡೆಯದೆ ಯೋಜನೆ ಜಾರಿಗೆ ಮುಂದಾಗಿರುವುದನ್ನು ಪರಿಸರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಯೋಜನೆಯಿಂದ ಶರಾವತಿ ಅಭಯಾರಣ್ಯಕ್ಕೆ ದೊಡ್ಡ ಮಟ್ಟದ ಹಾನಿ ಆಗಲಿದೆ. ಪೈಪ್‌ಲೈನ್, ರಸ್ತೆ, ಚಾನಲ್, ಸುರಂಗ ಕೊರೆಯುವಿಕೆ, ಬೃಹತ್ ತಂತಿಮಾರ್ಗ, ಭೂಗತ ವಿದ್ಯುತ್ ಉತ್ಪಾದನಾ ಕೇಂದ್ರಗಳ ನಿರ್ಮಾಣಕ್ಕೆ ಸಾವಿರಾರು ಎಕರೆ ಅರಣ್ಯ ನಾಶವಾಗಲಿದೆ. ಎರಡು ಲಕ್ಷಕ್ಕೂ ಹೆಚ್ಚಿನ ಮರಗಳು, 10 ಲಕ್ಷಕ್ಕೂ ಹೆಚ್ಚಿನ ಸಸ್ಯ ಸಂಪತ್ತು ನಾಶವಾಗಲಿದೆ. ಅಪಾರ ವನ್ಯಜೀವಿಗಳು ಅತಂತ್ರವಾಗಲಿದ್ದು, ಸಾಧುವಲ್ಲದ ಯೋಜನೆ ಜಾರಿ ಬೇಡ ಎಂದು 2018ರಲ್ಲೇ ಜೀವವೈವಿಧ್ಯ ತಜ್ಞರು ಸರ್ಕಾರಕ್ಕೆ ಆಗ್ರಹಿಸಿದ್ದರು ಎಂದು ಮನವರಿಕೆ ಮಾಡಿಕೊಟ್ಟರು.
ಯೋಜನೆಯಿಂದ ಕರಾವಳಿ ರೈತರಿಗೆ ಸಿಹಿ ನೀರು ಸಿಗುವುದಿಲ್ಲ. ಹೊನ್ನಾವರ, ಭಟ್ಕಳ ತಾಲೂಕಿನ ಶರಾವತಿ ಕುಡಿಯುವ ನೀರಿನ ಯೋಜನೆಗಳು ವಿಫಲವಾಗುವ ಸಾಧ್ಯತೆ ಇದೆ. ಪ್ರಸ್ತುತ ಸ್ಥಿತಿಗತಿಯಲ್ಲಿ ಶರಾವತಿ ಕಣಿವೆ ತನ್ನ ಧಾರಣಾ ಸಾಮರ್ಥ್ಯ ಕಳೆದು ಕೊಂಡಿರುವುದರಿಂದ ಹೊಸ ವಿದ್ಯುತ್ ಯೋಜನೆಗಳನ್ನು ಇಲ್ಲಿ ಜಾರಿಗೊಳಿಸುವುದು ಸೂಕ್ತವಲ್ಲ. ಭೂಕುಸಿತ ಸಂಭವಿಸುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಭೂಮಿ ಅಡಿಯಲ್ಲಿ ಕಾಮಗಾರಿ ನಡೆಸುವ ಶರಾವತಿ ಯೋಜನೆ ಖಂಡಿತ ಸಾಧುವಲ್ಲ. ತಕ್ಷಣ ಯೋಜನೆ ಕೈಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅನಂತ ಹೆಗಡೆ ಅಶೀಸರ, ಕೆ.ವೆಂಕಟೇಶ್ ಕವಲಕೋಡು, ಅನಂತರಾಮು, ಶ್ರೀಪಾದ ಬಿಚ್ಚುಗತ್ತಿ, ಆನೆಗುಳಿ ಸುಬ್ರಾವ್ ಇತರರಿದ್ದರು.

ಯೋಜನೆ ಏಕಾಏಕಿ ಮುನ್ನೆಲೆಗೆ ಯೋಜನೆ ಸಮೀಕ್ಷೆ ಬೇಡ ಎಂದು 2019ರಲ್ಲಿ ವೃಕ್ಷಲಕ್ಷ ಆಂದೋಲನ ಮಾಡಿ ವಿರೋಧ ವ್ಯಕ್ತಪಡಿಸಿತ್ತು. ಜೀವವೈವಿಧ್ಯ ಮಂಡಳಿ 2020ರ ಜೂ.5ರಂದು ಅಂದಿನ ಮುಖ್ಯಮಂತ್ರಿಗೆ ಶರಾವತಿ ಭೂಗತ ಯೋಜನೆ ಕೈಬಿಡಲು ಮನವಿ ಮಾಡಿತ್ತು. ನ್ಯಾಯಾಲಯ ತಡೆ ನೀಡಿದ್ದರಿಂದ ಯೋಜನೆ ಸ್ಥಗಿತವಾಗಿತ್ತು. ಈಗ ಏಕಾಏಕಿ ಯೋಜನೆ ಮುನ್ನೆಲೆಗೆ ತಂದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net