

ವಿಜಯಪುರ: ಅಂಗವಿಕಲರು ಕೀಳರಿಮೆ ತೊರೆದು ಸಕಾರಾತ್ಮಕ ಯೋಚನೆಯೊಂದಿಗೆ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಬಿಗಳಾಗಿ ಜೀವನ ನಡೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡ ‘ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ’ಗೆ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗವಿಕಲರಿಗೆ ಕೇವಲ ಸಹಾನುಭೂತಿ ಒದಗಿಸದೇ, ಅವರಿಗೂ ಅವಕಾಶ ಕಲ್ಪಿಸಿಕೊಟ್ಟು ಸ್ವಾವಲಂಬಿಗಳನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಮನೋಭಾವ ಬೆಳೆಸಿಕೊಳ್ಳಬೇಕು. ಸರ್ಕಾರ ಸಹ ಅಂಗವಿಕಲರು ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿ ಬದುಕಿ ಸುಂದರ ಬದುಕು ರೂಪಿಸಿಕೊಳ್ಳಲು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಯಾವುದೇ ಸಂದರ್ಭದಲ್ಲೂ ದೃತಿಗೆಡದೆ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕು. ದೃಢ ವಿಶ್ವಾಸ, ಆತ್ಮಸ್ಥೈರ್ಯದಿಂದ ಮುನ್ನುಗ್ಗಿ ನಾನು ಯಾರಿಗೂ ಕಡಿಮೆ ಇಲ್ಲ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಜಗತ್ತಿನ ಶ್ರೇಷ್ಠ ವಿಜ್ಞಾನಿಗಳು, ಸಾಧಕರಿಗೆ ಸಾಧನೆಗೈಯ್ಯಲು ವಿಕಲತೆ ಅಡ್ಡಿಯಾಗಲಿಲ್ಲ, ಅದನ್ನು ಮೀರಿ ಅವರು ತಮ್ಮ ಸಾಧನೆಯನ್ನು ಜಗತ್ತಿಗೆ ಸಾರಿದ್ದಾರೆ. ಜಗತ್ತಿಗೆ ಇವರು ದಾರಿದೀಪವಾಗಿದ್ದಾರೆ. ಇಂತಹ ಸಾಧಕರಿಂದ ಪ್ರೇರಣೆಗೊಂಡು ನೀವು ಸಹ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲದೊಂದಿಗೆ ಬದುಕುವ ಮೂಲಕ ಉತ್ತಮ ಜೀವನ ನಿರ್ವಹಣೆ ಮಾಡಬೇಕು ಎಂದರು.
ಇಂದಿನ ದಿನಗಳಲ್ಲಿ ಜಗತ್ತು ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ವೈದ್ಯಕೀಯ ಅವಿಷ್ಕಾರಗಳಾಗಿವೆ. ಪ್ರತಿ ವಿಶೇಷಚೇತನರಿಗೆ ವೈದ್ಯಕೀಯ ಸೌಲಭ್ಯ ವಿವಿಧ ಯೋಜನೆಗಳ ಲಾಭ ದೊರಕಿಸಲು ಸರ್ಕಾರದೊಂದಿಗೆ ಸಮಾಜವು ಕೈ ಜೋಡಿಸಬೇಕು. ತಮ್ಮ ಶಾಸಕರ ನಿಧಿಯಲ್ಲಿ ಶೇ.10ರಷ್ಟು ಅಂಗವಿಕಲರಿಗಾಗಿ ಅನುದಾನ ವಿನಿಯೋಗಿಸಲಾಗುತ್ತಿದೆ. ಬಿಎಲ್‌ಡಿಇ ಸಂಸ್ಥೆಯಲ್ಲಿ ಅಂಗವಿಕಲರಿಗೆ ಹಲವು ಆರೋಗ್ಯ ಸೇವೆಗಳನ್ನು ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.
ಅಂಗವೈಕಲ್ಯತೆಯನ್ನು ಸವಾಲಾಗಿ ಸ್ವೀಕರಿಸಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವಂತೆ ಹಾರೈಸಿದ ಅವರು, ತನ್ನಲ್ಲಿರುವ ಕೀಳರಿಮೆಯನ್ನು ತೊಡೆದು ಹಾಕಿ, ತಮ್ಮಲ್ಲಿರುವ ಪ್ರತಿಭೆಯಿಂದ ಉತ್ತಮ ಸಾಧೆನಗೈಯ್ಯುವಂತೆ ಅವರು ಕರೆ ನೀಡಿದರು.
ಜಿಪಂ ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರಾಜಶೇಖರ ಧೈವಾಡಿ, ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್.ಜಿ. ಲೋಣಿ, ವಿಜಯಪುರ ತಾಪಂ ಇಒ ಕೆ.ಹೊಂಗಯ್ಯ, ಡಾ. ಜಾವೀದ ಜಮಾದಾರ, ನಾಗರಾಜ್ ಲಂಬು, ಸಂಜೀವ ಖೋತ ಮತ್ತಿತರರಿದ್ದರು.