ಆಟಿ ಕಳೆಂಜ ಶಿವನ ಪ್ರತಿರೂಪ: ಪ್ರೊ.ಯೋಗೀಶ್ ಕೈರೋಡಿ ಅನಿಸಿಕೆ

Bel_Atikalenja
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಆಟಿ ಕಳೆಂಜ ಶಿವನ ಪ್ರತಿರೂಪ ಎಂಬ ನಂಬಿಕೆ ತುಳುನಾಡಿನಲ್ಲಿದೆ. ಆಟಿಕಳೆಂಜನ ವಿಶೇಷ ವೇಷಭೂಷಣ ತುಂಬಾ ಸರಳ ಮತ್ತು ಅರ್ಥಪೂರ್ಣವಾಗಿದ್ದು, ಆಟಿ ಕಳೆಂಜ ಮನೆಗೆ ಬಂದರೆ ದುಷ್ಟಶಕ್ತಿಗಳು ಹಾಗೂ ರೋಗ-ರುಜಿನಗಳು ದೂರವಾಗುತ್ತವೆ ಎಂದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಕನ್ನಡ ಮುಖ್ಯಸ್ಥ ಪ್ರೊ.ಯೋಗೀಶ್ ಕೈರೋಡಿ ಹೇಳಿದರು.

ಉಜಿರೆ ಎಸ್.ಡಿ.ಎಂ.ಕಾಲೇಜಿನಲ್ಲಿ ಇತಿಹಾಸ ವಿಭಾಗ ಮತ್ತು ತುಳು ಸಂಘದ ಆಶ್ರಯದಲ್ಲಿ ಆಯೋಜಿಸಿದ ತುಳುವೆರೆ ಆಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲ ಪ್ರೊ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಟಿ ಕಾರ್ಯಕ್ರಮಗಳಿಂದ ತುಳುನಾಡಿನ ಭವ್ಯ ಇತಿಹಾಸ ಮತ್ತು ಪರಂಪರೆ ಹಾಗೂ ಆಹಾರ ಔಷಧಗಳ ಬಗ್ಗೆ ಅರಿವು ಜಾಗೃತಿ ಉಂಟಾಗುತ್ತದೆ. ಆಧುನಿಕ ಜನತೆಗೆ ಆಟಿ ಆಡಂಬರವಾಗಿದೆ. ಮಾಲ್, ಹೋಟೆಲ್‌ಗಳಲ್ಲಿ ಹಬ್ಬಗಳನ್ನು ಆಚರಿಸುತ್ತಾರೆ ಎಂದರು.

ಕೊಯೂರಿನ ಅಮ್ಮಿ ನಲಿಕೆ ಮತ್ತು ಬಳಗದವರ ಆಟಿ ಕಳೆಂಜ ವೇಷ ವಿಶೇಷ ಮೆರುಗನ್ನು ನೀಡಿತು. ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು. ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಸನ್ಮತಿ ಕುಮಾರ್ ಸ್ವಾಗತಿಸಿ, ಉಪನ್ಯಾಸಕಿ ಅಭಿಜ್ಞಾ ಉಪಾಧ್ಯಾಯ ವಂದಿಸಿದರು. ವಿದ್ಯಾರ್ಥಿನಿಯರಾದ ಶ್ರದ್ಧಾ ಮತ್ತು ಸೃಷ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net