

ಬೆಂಗಳೂರು: 'ಆ ದಿನಗಳು' ಚೇತನ್ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದನ್ನು ಕೇಳಿದ್ದು ನೆನಪಿರಬಹುದು. ಆ ಚಿತ್ರಕ್ಕೆ '100 CRORES' ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಸಿಂಪಲ್ ಸುನಿ ಮುಖ್ಯ ಅತಿಥಿಯಾಗಿ ಆಗಮಿಸಿ, ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ಗೆ ರವಿ ಬಸ್ರೂರು
ಈ ಚಿತ್ರದಲ್ಲಿ ಮೊದಲ ಬಾರಿಗೆ ಭ್ರಷ್ಟ ಅಧಿಕಾರಿಯ ಪಾತ್ರದಲ್ಲಿ ಚೇತನ್ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರದ ಕುರಿತು ಮಾತನಾಡುವ ಅವರು, 'ದುಡ್ಡಿಗೋಸ್ಕರ ಏನು ಬೇಕಾದ್ರೂ ಮಾಡುವ ಪಾತ್ರ ನನ್ನದು. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಏಕಕಾಲದಲ್ಲಿ ಎರಡೂ ಅವತರಣಿಕೆಯ ಶೂಟಿಂಗ್ ಮಾಡಿದ್ದೇವೆ. ಕನ್ನಡದ ಜತೆಗೆ ತೆಲುಗು ಕಲಾವಿದರೂ ಈ ಸಿನಿಮಾದಲ್ಲಿದ್ದಾರೆ. ಇದೊಂದು ಹೊಸ ಅನುಭವ' ಎನ್ನುತ್ತಾರೆ ಚೇತನ್.
'100 CRORES' ಚಿತ್ರವನ್ನು ನಿರ್ಮಿಸುತ್ತಿರುವವರು ಸಂಗೀತ ನಿರ್ದೇಶಕ ಸಾಯಿಕಾರ್ತಿಕ್. ಕನ್ನಡದಲ್ಲಿ ಗಣೇಶ್ ನಟಿಸುತ್ತಿರುವ 'ತ್ರಿಬಲ್ ರೈಡಿಂಗ್' ಚಿತ್ರಕ್ಕೂ ಸಂಗೀತ ಸಂಯೋಜಿಸಿರುವ ಸಾಯಿಕಾರ್ತಿಕ್, 'ಈಗಾಗಲೇ ತೆಲುಗಿನಲ್ಲಿ 75ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದೇನೆ. ಈ ಸಿನಿಮಾ ಮೂಲಕ ನಿರ್ಮಾಪಕನಾಗಿದ್ದೇನೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಚಿತ್ರ ತಯಾರಾಗಿದ್ದು, ವಿರಾಟ್ ಚಕ್ರವರ್ತಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶೀರ್ಷಿಕೆ ಹೇಳುವಂತೆ ನೂರು ಕೋಟಿಯ ಹಿಂದೆಯೇ ಈ ಸಿನಿಮಾ ಸಾಗಲಿದ್ದು, ಪಕ್ಕಾ ಆ್ಯಕ್ಷನ್ ಅವತಾರದಲ್ಲಿ ಚೇತನ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ' ಎನ್ನುತ್ತಾರೆ.
ಚೇತನ್ ಅವರ ಆಚಾರ-ವಿಚಾರ ನೋಡಿದರೆ, ಅವರು ನಟನೆ ಜತೆಗೆ ನಿರ್ದೇಶನಕ್ಕೂ ಬರಬೇಕೆಂಬುದು ನಮ್ಮ ಬಯಕೆ ಎನ್ನುತ್ತಾರೆ ಸಿಂಪಲ್ ಸುನಿ. 'ಅವರ ವಿಚಾರಗಳನ್ನು ಸಿನಿಮಾದಲ್ಲಿ ಪ್ರಸ್ತುತಪಡಿಸಿದರೆ, ಅದಕ್ಕೆ ಮತ್ತಷ್ಟು ಮೈಲೇಜ್ ಸಿಗುತ್ತಿತ್ತು. 100 CRORES ಚಿತ್ರದ ಪೋಸ್ಟರ್ ಅಷ್ಟೇ ರೋಚಕವಾಗಿದೆ. ಪೋಸ್ಟರ್ನಲ್ಲಿರುವ 100ಕೋಟಿ ಸಿನಿಮಾ ತಂಡಕ್ಕೂ ದಕ್ಕಲಿ ಎಂಬುದು ನನ್ನ ಹಾರೈಕೆ' ಎಂದು ಚಿತ್ರತಂಡವನ್ನು ಹಾರೈಸುತ್ತಾರೆ ಸುನಿ.
ಇದನ್ನೂ ಓದಿ: ಕೀರ್ತಿ ಮದುವೆ ಸದ್ಯಕ್ಕಿಲ್ಲ
ಈಗಾಗಲೇ ಕರ್ನಾಟಕ ಮತ್ತು ಹೈದರಾಬಾದ್ನಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆ. ಚೇತನ್ ಮತ್ತು 'ಹ್ಯಾಪಿಡೇಸ್' ಸಿನಿಮಾ ಖ್ಯಾತಿಯ ಟೈಸನ್ ರಾಹುಲ್ ಮುಖ್ಯಭೂಮಿಕೆಯಲ್ಲಿದ್ದರೆ, ಸಾಕ್ಷಿ ಚೌಧರಿ, ಎಮಿ ಎಲಿ ಮತ್ತು ಐಶ್ವರ್ಯಾ ರಾಜ್ ನಾಯಕಿಯರಾಗಿದ್ದಾರೆ. ಇನ್ನುಳಿದಂತೆ ಇಂತುರಿ ವಾಸು, ಶರತ್ ಲೋಹಿತಾಶ್ವ, ಶೇಕಿಂಗ್ ಶೇಷು, ಭದ್ರಂ, ಅನ್ನಪೂರ್ಣಮ್ಮ, ಸಮೀರ್ ಸೇರಿ ಹಲವರು ತಾರಾಗಣದಲ್ಲಿದ್ದಾರೆ.
ಅಂದಹಾಗೆ, ಈ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಸದ್ಯದಲ್ಲೇ ಬಿಡುಗಡೆ ಮಾಡುವುದಕ್ಕೆ ಉದ್ದೇಶಿಸಿದೆ.