

ಮಂಗಳೂರು: ಮನೆಯ ಹಿತ್ತಿಲಿಗೆ ಬೃಹತ್ ಹೆಬ್ಬಾವೊಂದು ಬಂದಿದ್ದು, ಅದನ್ನು ಮಹಿಳೆಯೊಬ್ಬರು ಸಲೀಸಾಗಿ ಹಿಡಿದು ಗೋಣಿಗೆ ತುಂಬಿಸಿ ರಕ್ಷಿಸುವ ಧೈರ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಮಂಗಳೂರು ನಗರದ ಡೊಂಗರಕೇರಿ ನಿವಾಸಿ ಬಾಲಕೃಷ್ಣ ನಾಯಕ್ ಎಂಬವರ ಮನೆಯ ಹಿತ್ತಿಲಿಗೆ ಬೃಹತ್ ಹೆಬ್ಬಾವೊಂದು ಬಂದಿದ್ದು, ಮನೆಯ ಹಟ್ಟಿಯ ಕಟ್ಟಿಗೆ ರಾಶಿ ಹಾಕಿರುವಲ್ಲಿ ಹೆಬ್ಬಾವು ಸಂಚರಿಸುತ್ತಿತ್ತು. ಬಾಲಕೃಷ್ಣ ನಾಯಕ್ ಅವರ ಮನೆಗೆ ಈ ಹಿಂದೆಯೂ ಹಲವು ಬಾರಿ ಹೆಬ್ಬಾವು ಬಂದಿತ್ತು. ಮಂಗಳವಾರ ರಾತ್ರಿ ವೇಳೆ ಕಾಣಸಿಕ್ಕಿತ್ತು. ಈ ವೇಳೆ ಸ್ಥಳೀಯ ನಿವಾಸಿಯಾಗಿರುವ ಲಕ್ಷ್ಮೀ ಕಾಮತ್ ಎಂಬವರು ಹೆಬ್ಬಾವಿನ ಬಾಲ ಹಿಡಿದೆಳೆದು ಅಂಗಳಕ್ಕೆ ತಂದಿದ್ದಾರೆ. ಈ ವೇಳೆ ಹೆಬ್ಬಾವು ಹಾರಾಡುತ್ತಿದ್ದರೂ ಲಕ್ಷ್ಮೀ ಕಾಮತ್ ಅವರು ಬಾಲ ಹಿಡಿದು ಅದನ್ನು ನಿಯಂತ್ರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ನಂತರ ಈ ಹೆಬ್ಬಾವನ್ನು ಸ್ಥಳೀಯರ ನೆರವಿನಿಂದ ಗೋಣಿ ಚೀಲಕ್ಕೆ ತುಂಬಿಸಿ ರಕ್ಷಿಸಿ ಹಾವು ಹಿಡಿಯುವ ಆದಿತ್ಯ ಎಂಬವರ ಮೂಲಕ ಪಚ್ಚನಾಡಿ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ.
--------------
ಲಕ್ಷ್ಮೀ ಕಾಮತ್ ಅವರ ಗಂಡ ಹಿಂದೆ ಹೆಬ್ಬಾವು ರೀತಿಯ ಹಾವುಗಳನ್ನು ಹಿಡಿಯುತ್ತಿದ್ದರು. ಹಾಗಾಗಿ ಅವರ ಪತ್ನಿಗೂ ಧೈರ್ಯ ಬಂದಿದ್ದು, ಮಂಗಳವಾರ ಸಂಜೆ ಮನೆಗೆ ಹೆಬ್ಬಾವು ಬಂದಾಗ ಆಕೆಯೇ ಬಾಲವನ್ನು ಹಿಡಿದಿದ್ದಾರೆ. ಹೆಬ್ಬಾವು ವಿಷಕಾರಿಯಲ್ಲ. ಹಾಗಾಗಿ ಹೆದರಬೇಕಿಲ್ಲ. ಗಲೀಜು ಮಾಡುತ್ತದೆ ಅಂತಷ್ಟೇ ಹಿಡಿಯಲು ಹಿಂಜರಿಕೆ. ಪ್ರತಿ ಬಾರಿ ಹೆಬ್ಬಾವು ಬರುತ್ತಿರುವುದರಿಂದ ಹಾವು ಹಿಡಿಯುವವರಿಗೆ ಒಂದು ಸಾವಿರ ಕೊಡಬೇಕಾಗುತ್ತದೆ
ಬಾಲಕೃಷ್ಣ ನಾಯಕ್, ಡೊಂಗರಕೇರಿ ನಿವಾಸಿ