

ಉಳ್ಳಾಲ: ಪ್ರತಿವರ್ಷ ನೀರಿನ ಸಮಸ್ಯೆಯಿಂದ ತತ್ತರಿಸುತ್ತಿದ್ದ ಉಳ್ಳಾಲ, ಪಾವತಿಯಾಗಬೇಕಾದ ಶುಲ್ಕ ಬಾಕಿಯಿಟ್ಟಿರುವ ಬಗ್ಗೆ ಕಿರಿಕ್ ಮಾಡುತ್ತಿದ್ದ ಮನಪಾ, ಈ ಹಂಗಿನಿಂದ ಉಳ್ಳಾಲ ನಗರಸಭೆ ಮುಕ್ತಿ ಪಡೆಯುವಂತಾಗಿದೆ. 16 ಕಿಮೀ ದೂರದ ಗ್ರಾಮ ಸಜೀಪದಿಂದ ಕಡಲ ನಗರಿ ಉಳ್ಳಾಲಕ್ಕೆ ಜಲಧಾರೆ ಹರಿಯಲಾರಂಭಿಸಿದೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಯೋಜನೆ ನೀಡಿ ಸಂತಸದ ನಗೆ ಬೀರಿದ್ದಾರೆ ಸ್ಪೀಕರ್ ಯು.ಟಿ.ಖಾದರ್.
ಮಂಗಳೂರು ಕ್ಷೇತ್ರ ಈಗ ಉಳ್ಳಾಲ ತಾಲೂಕು ಆಗಿದೆ. ಅರಬ್ಬೀ ಸಮುದ್ರ, ನೇತ್ರಾವತಿ, ಶರಯೂ ಹೀಗೆ ಹಲವು ನದಿಗಳ ಸಂಗಮ ಸ್ಥಾನ ಉಳ್ಳಾಲದಲ್ಲಿ ಶುದ್ಧ ಕುಡಿಯುವ ನೀರಿನ ತಾತ್ವಾರಕ್ಕೆ ದಶಕಗಳ ಇತಿಹಾಸ ಇದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಲವು ವರ್ಷಗಳ ಹಿಂದೆ ಎಡಿಬಿ ಯೋಜನೆಯಡಿ ತುಂಬೆಯಿಂದ ಮಂಗಳೂರು ನಗರ ಪಾಲಿಕೆಯ ಮೂಲಕ ಉಳ್ಳಾಲಕ್ಕೆ ನೀರು ತರುವ ನಿಟ್ಟಿನಲ್ಲಿ ಪೈಪ್ ಲೈನ್, ನೀರು ಸಂಗ್ರಹಿಸಲು ಅಲ್ಲಲ್ಲಿ ತೊಟ್ಟಿ ನಿರ್ಮಿಸಲಾಗಿತ್ತು. ಆದರೆ ಇಷ್ಟೊಂದು ದೊಡ್ಡ ಯೋಜನೆಯಡಿ ಒಂದು ವಾರ್ಡಿಗೂ ಸಮರ್ಪಕವಾಗಿ ನೀರು ಕೊಡಲು ಸಾಧ್ಯವಾಗಿರಲಿಲ್ಲ. ಪ್ರತಿದಿನ ಉಳ್ಳಾಲಕ್ಕೆ ಎಂಟು ಎಂಎಲ್‌ಡಿ ನೀರು ನೀಡಬೇಕಿದ್ದ ಮನಪಾ ಕೇವಲ ಒಂದೂವರೆ ಎಂಎಲ್‌ಡಿ ನೀರು ಮಾತ್ರ ನೀಡಿತ್ತು. ಅದರಲ್ಲೂ ಬಹುಪಾಲು ನೀರು ನೇತ್ರಾವತಿ ನದಿಯಲ್ಲೇ ಸೋರಿಕೆಯಾಗುತ್ತಿತ್ತು. ಲಕ್ಷಗಟ್ಟಲೆ ನೀರಿನ ಶುಲ್ಕ ಪಾವತಿಸಬೇಕಿದ್ದ ನಗರಸಭೆ ಕೆಲವೊಮ್ಮೆ ಹಣ ಬಾಕಿಯಿಟ್ಟಾಗ ನೀರು ನಿಲ್ಲಿಸಲೂ ಮನಪಾ ಮುಂದಾಗಿತ್ತು.
ಇದರಿಂದಾಗಿ ಪ್ರತಿ ಬೇಸಿಗೆಯಲ್ಲೂ ಉಳ್ಳಾಲದಲ್ಲಿ ಟ್ಯಾಂಕರ್ ನೀರು ಸರಬರಾಜು ಸಾಮಾನ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಸಜೀಪದಿಂದ ನೇರವಾಗಿ ಉಳ್ಳಾಲಕ್ಕೆ ನೀರು ತರುವ ಯೋಜನೆ ನಗರಾಭಿವೃದ್ಧಿ ಸಚಿವರಾಗಿದ್ದ ಸಂದರ್ಭ ಯು.ಟಿ.ಖಾದರ್ ರೂಪಿಸಿದ್ದರು. ಈ ಯೋಜನೆ ಫಲ ನೀಡುವ ಬಗ್ಗೆ ಇದ್ದ ಅನುಮಾನಕ್ಕೀಗ ಸ್ಪಷ್ಟ ಉತ್ತರ ಸಿಕ್ಕಿದಂತಾಗಿದೆ.
ಕಂಬಳಪದವು ಎತ್ತರದ ಪ್ರದೇಶದಲ್ಲಿ ಬೃಹತ್ ಎರಡು ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಒಂದು ಟ್ಯಾಂಕ್ 200 ಲಕ್ಷ ಲೀಟರ್ ಸಾಮರ್ಥ್ಯವಿದ್ದು, ಇದರಲ್ಲಿ ನೀರು ಸಂಗ್ರಹವಾಗಿ, ಪಕ್ಕದಲ್ಲೇ ಇರುವ 600 ಲಕ್ಷ ಲೀಟರ್ ನೀರಿನ ಟ್ಯಾಂಕ್ ಹೋಗಿ ಶುದ್ಧೀಕರಣಗೊಳ್ಳುತ್ತದೆ. ಶುದ್ಧೀಕರಣ ಟ್ಯಾಂಕ್ 72 ಎಂಎಲ್‌ಡಿ(720 ಲಕ್ಷ ಲೀಟರ್) ಸಾಮರ್ಥ್ಯ ಹೊಂದಿದೆ. ಇಲ್ಲಿಂದ ಉಳ್ಳಾಲ ನಗರಸಭಾ ವ್ಯಾಪ್ತಿಯ ಚೆಂಬುಗುಡ್ಡೆಯಲ್ಲಿ ನಿರ್ಮಾಣಗೊಂಡಿರುವ ಟ್ಯಾಂಕ್‌ಗೆ ಬರುತ್ತದೆ. ಇಲ್ಲಿ 30 ಲಕ್ಷ ಲೀಟರ್‌ನಂತೆ ಎರಡು ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ.
ಹಿಂದಿನಿಂದಲೂ ಇರುವ ಕೆಲವು ಎಡಿಬಿ ಪೈಪ್‌ಲೈನ್‌ಗೆ ಈ ಟ್ಯಾಂಕ್‌ನಿಂದ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಎಲ್ಲಾ ವ್ಯವಸ್ಥೆಗೆ 1300 ಎಚ್‌ಪಿಯ ಮೂರು ಪಂಪ್‌ಗಳನ್ನು ಅಳವಡಿಸಲಾಗಿದ್ದು, ತುರ್ತು ಸಂದರ್ಭಕ್ಕೆ ಒಂದು ಪಂಪ್ ಮೀಸಲಿಡಲಾಗಿದೆ. 192 ಕೋಟಿಯ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ 50 ವರ್ಷಗಳ ಸುದೀರ್ಘ ಯೋಜನೆ ಇದಾಗಿದೆ.
ಸೋಮೇಶ್ವರ, ಕೋಟೆಕಾರ್ ಹಾಗೂ ಗ್ರಾಮೀಣ ಭಾಗಕ್ಕೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಆಗಲಿದ್ದು, 284ಕೋಟಿ ಯೋಜನೆಯ ಕಾಮಗಾರಿಗೆ ಶೀಘ್ರ ಮುಖ್ಯಮಂತ್ರಿಯೇ ಚಾಲನೆ ನೀಡಲಿದ್ದಾರೆ. ಮೂರನೇ ಹಂತದ ಕಾಮಗಾರಿ ಅಗತ್ಯತೆ ಕಂಡು ಬಂದಲ್ಲಿ ಜಗಜ್ಜೀವನ್ ರಾವ್ ಕುಡಿಯುವ ನೀರು ಯೋಜನೆಯಡಿ ನಡೆಸುವ ಯೋಜನೆ ಖಾದರ್ ಅವರದ್ದಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ದಶಕಗಳಿಂದ ಉಳ್ಳಾಲ ಭಾಗದ ಜನತೆ ಎದುರಿಸಿದ್ದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ.
ಸಜೀಪನಡು ಗ್ರಾಮದ ಆಲಾಡಿ ನೇತ್ರಾವತಿ ನದಿ ತೀರದಲ್ಲಿ ಆರ್‌ಸಿಸಿ ಚೇಂಬರ್ ಮತ್ತು ಪಂಪ್‌ಹೌಸ್, ಪಜೀರ್ ಗ್ರಾಮದ ಕಂಬಳಪದವಿನಲ್ಲಿ ನೀರು ಸಂಗ್ರಹಣಾ ಮತ್ತು ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ. ಆಲಾಡಿಯಿಂದ 965 ಮಿಮೀ ವ್ಯಾಸ, 16 ಮಿಮೀ ದಪ್ಪದ 15,500 ಮೀಟರ್ ಉದ್ದದ ಎಂಎಸ್ ಪೈಪ್ ಬಳಸಿ ಕಂಬಳಪದವಿಗೆ ನೀರು ಹರಿಯಬಿಡಲಾಗಿದೆ.
ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರದ ನಿಟ್ಟಿನಲ್ಲಿ ಸುದೀರ್ಘ ಅವಧಿಗೆ ರೂಪಿಸಿದ ಯೋಜನೆ ಇದಾಗಿದೆ. ಕೋಟೆಕಾರ್, ಸೋಮೇಶ್ವರ ಹಾಗೂ ಗ್ರಾಮೀಣ ಭಾಗಕ್ಕೂ ಯೋಜನೆ ರೂಪಿಸಲಾಗಿದ್ದು, ಮುಖ್ಯಮಂತ್ರಿಯೇ ಚಾಲನೆ ನೀಡಲಿದ್ದಾರೆ. ಯು.ಟಿ.ಖಾದರ್, ವಿಧಾನಸಭಾ ಸ್ಪೀಕರ್.
ಯು.ಟಿ.ಖಾದರ್, ವಿಧಾನಸಭಾ ಸ್ಪೀಕರ್.
ಕ್ಷೇತ್ರದ ಬಹುತೇಕ ಕಡೆಗಳಲ್ಲಿ ಹಲವು ವರ್ಷಗಳಿಂದ ಇದ್ದ ನೀರಿನ ಸಮಸ್ಯೆಗೆ ಶಾಸಕರ ಪ್ರಯತ್ನದಿಂದ ಪರಿಹಾರ ಸನ್ನಿಹಿತವಾಗಿದೆ. ಪ್ರಥಮ ಹಂತವಾಗಿ ಸಜೀಪದಿಂದ ಉಳ್ಳಾಲಕ್ಕೆ ನೀರು ಹರಿದುಬಂದಿದ್ದು, ಮುಂದಕ್ಕೆ ಸೋಮೇಶ್ವರ, ಕೋಟೆಕಾರ್ ಸಹಿತ ಎಲ್ಲಾ ಗ್ರಾಮಗಳಲ್ಲೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದ್ದು, ಶೀಘ್ರ ಕೆಲಸ ಆರಂಭಿಸುವ ಭರವಸೆ ನೀಡಿದ್ದಾರೆ. ಪ್ರಶಾಂತ್ ಕಾಜವ, ಅಧ್ಯಕ್ಷ, ಮುಡಿಪು ಬ್ಲಾಕ್ ಕಾಂಗ್ರೆಸ್.
ಪ್ರಶಾಂತ್ ಕಾಜವ, ಅಧ್ಯಕ್ಷ, ಮುಡಿಪು ಬ್ಲಾಕ್ ಕಾಂಗ್ರೆಸ್.
ಅಷ್ಟು ದೂರದಿಂದ ಉಳ್ಳಾಲಕ್ಕೆ ನೀರಿನ ವ್ಯವಸ್ಥೆ ಮಾಡಿರುವುದು ಅತಿದೊಡ್ಡ ಸಾಧನೆ. ಪ್ರಾಯೋಗಿಕ ಹಂತದಲ್ಲೇ ಶಾಸಕರ ಯೋಜನೆ ಫಲ ನೀಡಿದೆ. ಶಾಸಕರು ಕ್ಷೇತ್ರಕ್ಕೆ ಸಾಕಷ್ಟು ಯೋಜನೆಗಳನ್ನು ತಂದರೂ ಸಮರ್ಪಕ ನಿರ್ವಹಣೆ ಹಾಗೂ ಜನರಿಗೆ ಪ್ರಯೋಜನ ತಲುಪಿಸುವಲ್ಲಿ ಅಧಿಕಾರಿಗಳು, ತಳಮಟ್ಟದ ನಾಯಕರು, ಜನಪ್ರತಿನಿಧಿಗಳು ವಿಫಲರಾಗುತ್ತಿರುವುದು ಖೇದಕರ. ಸುರೇಶ್ ಭಟ್ನಗರ, ಸದಸ್ಯ, ಧಾರ್ಮಿಕ ಪರಿಷತ್.
ಸುರೇಶ್ ಭಟ್ನಗರ, ಸದಸ್ಯ, ಧಾರ್ಮಿಕ ಪರಿಷತ್.