ಆದಿವಾಸಿಗಳ ಸಮಸ್ಯೆಗೆ ಸಂಸತ್‌ನಲ್ಲಿ ಧ್ವನಿ

Nimbalkara
Published on

ದಾಂಡೇಲಿ: ಹಲವಾರು ವರ್ಷಗಳಿಂದ ಪರಿಹಾರವಾಗದ ಜಿಲ್ಲೆಯ ಬುಡಕಟ್ಟು, ಆದಿವಾಸಿಗಳ ಸಮಸ್ಯೆಗೆ ಸಂಸತ್ ಮೊದಲ ಅಧಿವೇಶನದಲ್ಲಿಯೇ ಧ್ವನಿಯಾಗುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳಕರ ಭರವಸೆ ನೀಡಿದರು.

ದಾಂಡೇಲಿಯ ಮರಾಠಾ ಸಮಾಜದ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು , ಆದಿವಾಸಿ ಸಮ್ಮೇಳನ ಹಾಗೂ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದುಳಿದ ಬುಡಕಟ್ಟು ಜನರ ಸಮಸ್ಯೆಗಳನ್ನು, ಕಷ್ಟ ನೋವುಗಳನ್ನು ಆಲಿಸಲು ಇಂತಹ ಸಮಾವೇಶ ಅವಕಾಶ ಮಾಡಿಕೊಟ್ಟಿದೆ ಎಂದರು.

ಬುಡಕಟ್ಟು ಸಮುದಾಯದ ಜನರ ಸಮಸ್ಯೆಗಳನ್ನು ಅರಿಯುವುದು ನನ್ನ ಪ್ರಮುಖ ಉದ್ದೇಶವಾಗಿದೆ. ಸಭೆಯಲ್ಲಿ ಮತಯಾಚನೆ ನನ್ನ ಮುಖ್ಯ ಉದ್ದೇಶವಲ್ಲ. ನನ್ನನ್ನು ತಮ್ಮ ಮಗಳೆಂದು ಭಾವಿಸಿ ಸಮಸ್ಯೆಗಳನ್ನು ತಿಳಿಸಿ, ಅವುಗಳನ್ನು ಬಗೆಹರಿಸಲು ಧೈರ್ಯದಿಂದ ಸದಾ ಸಂಪರ್ಕದಲ್ಲಿ ಇರಿ ಎಂದು ಕೋರಿದರು.
ಕುಣಬಿ, ಗೌಳಿ, ಹಾಲಕ್ಕಿ ಹಾಗೂ ಇತರ ಬುಡಕಟ್ಟು ಸಮುದಾಯದ ಜನರು ಅರಣ್ಯದಲ್ಲಿಯೇ ಮೂಲಸೌಕರ್ಯಗಳಿಂದ ವಂಚಿತರಾಗಿ ಕಷ್ಟದ ಜೀವನ ನಡೆಸುವ ಪರಿಶ್ರಮಿಗಳು, ಅರಣ್ಯದ ಭೂಮಿಯ ಮಾಲೀಕತ್ವ ಬುಡಕಟ್ಟು ಜನರಿಗೆ ಕೊಡಿಸುವುದು. ಕುಣಬಿ, ಗೌಳಿ, ಹಾಲಕ್ಕಿ ಸಮುದಾಯವನ್ನು ಪ.ಪಂ ಕ್ಕೆ ಸೇರಿಸುವುದು ತಮ್ಮ ಅತಿ ಪ್ರಮುಖ ಗುರಿಯಾಗಿದೆ ಎಂದರು.

ಸಮಾಲೋಚನೆಯಲ್ಲಿ ಉ.ಕ ಜಿಲ್ಲೆಯ ವಿವಿಧ ತಾಲೂಕು ಹಾಗೂ ವಿವಿಧ ಗ್ರಾಮಗಳಿಂದ ಬಂದ ಕುಣಬಿ, ಹಾಲಕ್ಕಿ, ಸಿದ್ದಿ ಹಸಲರು, ಗೌಳಿ, ಹಗೆರ, ಮುಕ್ರಿ, ಹಳೇರ ಸಮುದಾಯದ ಮುಖಂಡರಾದ ಸುಭಾಸ ಗೌಡ, ಸುಮಿತ್ರಾ ಗೌಡ, ರೇವು ಪಾಟೀಲ, ವೆಂಕಟರಮಣ, ಜುಲಿಯಾನಾ ಫರ್ನಾಂಡಿಸ್, ಅಂತೋನಿ ಡಿಗ್ಗೆಕರ ಇತರರು ತಮ್ಮ ಸಮುದಾಯದ ಪ್ರಮುಖ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿಗೆ ಮನವರಿಕೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಮಾತನಾಡಿ, ಬುಡಕಟ್ಟು ಜನರ ಸಮಸ್ಯೆಗಳಿಗೆ ಹಿಂದಿನ ಅನುಭವದ ಪ್ರಕಾರ ಕೇವಲ ಕಾಂಗ್ರೆಸ್ ಪಕ್ಷ ಸ್ಪಂದಿಸಲು ಸಾಧ್ಯ. ಇದೇ ಸಂದರ್ಭದಲ್ಲಿ ಅವರು ದಾಂಡೇಲಿಯ ಜನರ ಪರವಾಗಿ ದಾಂಡೇಲಿಯಿಂದ ಅಳ್ನಾವರಕ್ಕೆ ಪ್ರಯಾಣಿಕರ ರೈಲು ಆರಂಭಕ್ಕೆ ಮತ್ತು ನಗರದ ಇಎಸ್‌ಐ ಆಸ್ಪತ್ರೆನ್ನು ಉನ್ನತಿಕರಣಗೊಳಿಸಲು ಮನವಿ ಮಾಡಿದರು.
ಆರಂಭದಲ್ಲಿ ಕುಣಬಿ, ಸಿದ್ದಿ ಸಮುದಾಯದ ಕಲಾವಿದರಿಂದ ಪ್ರಾರ್ಥನೆ, ಸಿದ್ದಿ ಹಾಲಕ್ಕಿ ನೃತ್ಯ ಏರ್ಪಡಿಸಲಾಗಿತ್ತು.

ಆರೋಗ್ಯ ವಿಚಾರಣೆ

ಕಾರ್ಯಕ್ರಮ ಮುಗಿದು ಕಾರು ಹತ್ತುವ ವೇಳೆ ಕುಣಬಿ ಮಹಿಳೆಯೊಬ್ಬಳು ಪ್ರವೇಶ ದ್ವಾರದ ಬಳಿ ಎಡವಿ ಬಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳಕರ ಮಹಿಳೆಯ ಬಳಿ ಬಂದು ಆರೋಗ್ಯ ವಿಚಾರಿಸಿ ಪ್ರಥಮ ಚಿಕಿತ್ಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net