

ಮ್ಯಾಡ್ರಿಡ್: ಕರೊನಾ ವೈರಸ್ ಪ್ರಪಂಚದಾದ್ಯಂತ ಹರಡಿಕೊಂಡಾಗಿನಿಂದ ಜನ ಕಂಗಾಲಾಗಿದ್ದಾರೆ. ಮನೆಯಿಂದ ಹೊರ ಬರದೆ ಮನೆಯೊಳಗೇ ಕುಳಿತು ಟೈಮ್ ಪಾಸ್ ಮಾಡುತ್ತಿದ್ದಾರೆ. ಅನೇಕರ ಪ್ರತಿದಿನದ ಜಿಮ್ ಪ್ರಾಕ್ಟೀಸ್ ಈ ಕರೊನಾದಿಂದಾಗಿ ನಿಂತು ಹೋಗಿದೆ. ಕರೊನಾದಿಂದಾಗಿ ಸುಮ್ಮನಾಗದ ಹೆಲ್ತ್ ಇನ್ಸ್ಟ್ರಕ್ಟರ್ ಒಬ್ಬ ಅಪಾರ್ಟ್ಮೆಂಟ್ನ ಮಧ್ಯ ಭಾಗದಲ್ಲಿ ಟೆರೇಸ್ನ ಮೇಲೆ ನಿಂತು ಪೂರ್ತಿ ಅಪಾರ್ಟ್ಮೆಂಟ್ಗೆ ವರ್ಕ್ಔಟ್ ಮಾಡಿಸಿದ್ದಾನೆ.
ಹೆಲ್ತ್ ಇನ್ಸ್ಟ್ರಕ್ಟರ್ ಒಬ್ಬ ಅಪಾರ್ಟ್ಮೆಂಟ್ನ ಮಧ್ಯ ಭಾಗದಲ್ಲಿರುವ ಕಟ್ಟಡದ ಮೇಲ್ಭಾಗದಲ್ಲಿ ನಿಂತು ವರ್ಕ್ ಔಟ್ ಹೇಳಿಕೊಡುತ್ತಾನೆ. ಅವನು ಹೇಳಿಕೊಟ್ಟಂತೆ, ಅಪಾರ್ಟ್ಮೆಂಟ್ನಲ್ಲಿ ತಮ್ಮನ್ನು ತಾವು ಪ್ರತ್ಯೇಕಿಸಿಟ್ಟುಕೊಂಡಿರುವ ಜನರು ಮಾಡುತ್ತಾರೆ. ಮನೆಯ ಬಾಲ್ಕನಿಯಲ್ಲಿ ನಿಂತು ಆತ ಹೇಳಿಕೊಡುವುದನ್ನು ನೋಡುವ ಜನರು ಚಾಚೂ ತಪ್ಪದಂತೆ ಆತನನ್ನು ಅನುಸರಿಸುತ್ತಾರೆ. ಇಂತದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೈರಸ್ ಭೀತಿಗೆ ಮನೆಯೊಳಗೆ ಸುಮ್ಮನೆ ಕಾಲಹರಣ ಮಾಡದೆ, ದೇಹದ ಬಗ್ಗೆ ಕಾಳಜಿ ವಹಿಸಿ ಸಧೃಡರಾಗುತ್ತಿರುವ ಸ್ಪೇನ್ನ ಜನರಿಗೆ ದೇಶ ವಿದೇಶಗಳಿಂದ ಮೆಚ್ಚುಗೆ ಕೇಳಿಬರುತ್ತಿದೆ. ನಿಮ್ಮ ಉತ್ಸಾಹವನ್ನು ನೋಡಿದರೆ ಕರೊನಾ ವೈರಸ್ ಕೂಡ ಓಡಿಹೋಗುತ್ತದೆ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)