ತುಮಕೂರಿನ ಎಂಪ್ರೆಸ್​ ಶಾಲೆಯಲ್ಲಿ ಶಿಕ್ಷಕರನ್ನು ತಬ್ಬಿ ಬಿಕ್ಕಿಬಿಕ್ಕಿ ಅತ್ತ ವಿದ್ಯಾರ್ಥಿನಿಯರು... ಈ ದೃಶ್ಯ ನೋಡಿದ್ರೆ ಭಾವುಕರಾಗ್ತೀರಿ

1317781
Published on

ತುಮಕೂರು: ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕರನ್ನು ತಬ್ಬಿ ಬಿಕ್ಕಿಬಿಕ್ಕಿ ಅತ್ತ ವಿದ್ಯಾರ್ಥಿನಿಯರು, 'ಸರ್​... ಪ್ಲೀಸ್​ ಹೋಗ್ಬೇಡಿ ಸರ್​...' ಎಂದು ಗೋಗರೆಯುತ್ತಿದ್ದರು. ಅತ್ತ ಆ ಶಿಕ್ಷಕರೂ ಭಾವುಕರಾಗಿ ಕಣ್ಣೀರು ಹಾಕುತ್ತಲೇ ಇದ್ದರು. 'ನಿಮ್ಮ ಪ್ರೀತಿಯ ಶಿಕ್ಷಕರನ್ನ ಕಣ್ಣೀರು ಹಾಕುತ್ತಾ ಕಳುಹಿಸ ಬೇಡ್ರಮ್ಮ... ಪ್ಲೀಸ್​ ಅವರನ್ನ ನಗುನಗುತ್ತಾ ಕಳುಹಿಸಿ ಕೊಡಿ..' ಎಂದು ಉಳಿದ ಶಿಕ್ಷಕರು ಮನವೊಲಿಸುತ್ತಲೇ ಇದ್ದರು...

ಇಂತಹ ಭಾವುಕ ಕ್ಷಣಕ್ಕೆ ತುಮಕೂರು ನಗರದ ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆ ಸಾಕ್ಷಿಯಾಯಿತು. ಈ ಶಾಲೆಯಲ್ಲಿ ಶಿಕ್ಷಕರಾಗಿದ್ದ ಡಾ.ಎಸ್.ಕೃಷ್ಣಪ್ಪ ಅವರು ಗುಬ್ಬಿ ತಾಲೂಕು ಅಂಕಸಂದ್ರ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿ ಮುಂಬಡ್ತಿ ಹೊಂದಿದ್ದಾರೆ. ಈ ಹಿನ್ನೆಲೆ ಡಾ.ಎಸ್.ಕೃಷ್ಣಪ್ಪ ಅವರಿಗೆ ಎಂಪ್ರೆಸ್​ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.

ವಿದ್ಯಾರ್ಥಿನಿಯರ ಅತ್ಯಂತ ನೆಚ್ಚಿನ ಶಿಕ್ಷಕ ಕೃಷ್ಣಪ್ಪ. ಕನ್ನಡ ಶಿಕ್ಷಕರಾದ ಕೃಷ್ಣಪ್ಪ, 22 ವರ್ಷಗಳಿಂದ ನಗರದ ಎಂಪ್ರೆಸ್ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ಇತ್ತೀಚಿಗಷ್ಟೇ ಹಂಪಿ ವಿವಿಯಿಂದ ಪಿಎಚ್​ಡಿ ಪದವಿ ಪಡೆದಿದ್ದರು‌. ಅತ್ಯಂತ ಸರಳ ಹಾಗೂ ಪ್ರಾಮಾಣಿಕ ಶಿಕ್ಷಕರೆಂದು ಇಲಾಖೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಮುಂಬಡ್ತಿಯೊಂದಿಗೆ ವರ್ಗಾವಣೆಯಾದ ಡಾ.ಕೃಷ್ಣಪ್ಪ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದ ವೇಳೆ 'ನಮ್ಮನ್ನೆಲ್ಲಾ ಬಿಟ್ಟು ಹೋಗ್ಬೇಡಿ ಸರ್' ಎಂದು ತಬ್ಬಿಕೊಂಡು ವಿದ್ಯಾರ್ಥಿನಿಯರು ಬಿಕ್ಕಿಬಿಕ್ಕಿ ಅತ್ತರು. ಶಾಲೆಯಿಂದ ಹೊರ ಬರುವವರೆಗೂ ಕೃಷ್ಣಪ್ಪರ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು 'ಹೋಗ್ಬೇಡಿ ಸರ್​...' ಎಂದು ಕಣ್ಣೀರು ಸುರಿಸಿದರು. ಮಕ್ಕಳ ಪ್ರೀತಿ-ಅಭಿಮಾನ ಕಂಡು ಡಾ.ಕೃಷ್ಣಪ್ಪ ಕೂಡ ಪುಟ್ಟ ಮಗುವಿನಂತೆ ಕಣ್ಣೀರು ಸುರಿಸುತ್ತಲೇ ಇದ್ದರು. ಈ ದೃಶ್ಯ ವೈರಲ್​ ಆಗಿದ್ದು, ಮಕ್ಕಳ-ಶಿಕ್ಷಕರ ನಡುವಿಗೆ ಬಾಂಧವ್ಯ ಕಂಡು ನೆಟ್ಟಿಗರೂ ಭಾವುಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net