

ಹೊಸಪೇಟೆ: ಗುರುವಾರ ಬೆಳ್ಳಬೆಳಗ್ಗೆ ಹೊಸಪೇಟೆ ತಾಲೂಕಿನ ಗುಂಡಾ ಸಸ್ಯೋಧಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನೀರಿನಂತೆ ಬಿಯರ್ ಹರಿದಿದೆ.
ಬಿಯರ್ ಬಾಟಲಿಗಳನ್ನು ತುಂಬಿಕೊಂಡು ಮಂಗಳೂರಿನಿಂದ ಯಾದಗಿರಿಗೆ ಹೊರಟಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಅದರಲ್ಲಿದ್ದ ಬಿಯರ್ ಬಾಟಲಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಲ್ಲದೆ, ಬಾಟಲಿಗಳು ಒಡೆದು ನೀರಿನಂತೆ ರಸ್ತೆಯಲ್ಲಿ ಮದ್ಯ ಹರಿಯಿತು. ಲಾರಿಯಲ್ಲಿ ಭರ್ತಿ ತುಂಬಿದ್ದ ಬಿಯರ್ ಬಾಟಲಿಯಲ್ಲಿ ಶೇ.80 ಬಾಟಲಿಗಳು ಹಾಳಾಗಿವೆ.
ಘಟನೆಯಲ್ಲಿ ಲಾರಿ ಚಾಲಕ, ಕ್ಲೀನರ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಪೊಲೀಸರು, ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.