

ಕೋಟ: ಉತ್ತರಾಖಂಡದ ಸಹಸ್ತ್ರ ತಾಲ್ ಶಿಖರಕ್ಕೆ ಚಾರಣಕ್ಕೆ ತೆರಳಿ ಹವಾಮಾನ ವೈಪರಿತ್ಯದಿಂದ ಕುಂದಾಪುರ ತಾಲೂಕಿನ ಕುಂಭಾಶಿ ಮೂಲದ ಪದ್ಮನಾಭ ಭಟ್ ಎಂಬುವರು ಮೃತಪಟ್ಟವರು.
ಚಾರಣಕ್ಕೆ ತೆರಳಿದ್ದ 22 ಜನರ ತಂಡದಲ್ಲಿ ಪದ್ಮನಾಭ ಭಟ್ ಕೂಡ ಇದ್ದರು. ಇವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಮೇ 29ರಂದು 22 ಜನರ ತಂಡದೊಂದಿಗೆ ಉತ್ತರಕಾಶಿಯ ಸಹಸ್ತ್ರ ತಾಲ್‌ಗೆ ಚಾರಣಕ್ಕೆ ತೆರಳಿದ್ದರು. ಚಾರಣ ಮುಗಿಸಿ ಕೆಳಗೆ ಬರುವಾಗ ಹವಾಮಾನ ವೈಪರಿತ್ಯದಿಂದ ದುರ್ಘಟನೆ ಸಂಭವಿಸಿದೆ. ದುರ್ಘಟನೆಯಲ್ಲಿ ಒಟ್ಟು 9 ಜನ ಮೃತಪಟ್ಟಿದ್ದಾರೆ. ಇನ್ನು, ಅಪಾಯಕ್ಕೆ ಸಿಲುಕಿದ್ದ 13 ಜನರನ್ನು ರಕ್ಷಣೆ ಮಾಡಲಾಗಿದ್ದು, ಇವರು ಗುರುವಾರ ರಾತ್ರಿ 9.30ರ ಸುಮಾರಿಗೆ ವಿಮಾನದ ಮೂಲಕ ಬೆಂಗಳೂರಿಗೆ ಬಂದರು. ರಕ್ಷಣಾ ಕಾರ್ಯಾಚರಣೆ ಉಸ್ತುವಾರಿಗೆ ತೆರಳಿದ್ದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರೂ ಈ ಚಾರಣಿಗರ ಜತೆಗೆ ಬಂದಿದ್ದಾರೆ.
ಬುಧುವಾರ ಐದು ಮೃತದೇಹ ಸಿಕ್ಕಿದ್ದವು. ಗುರುವಾರ ಮತ್ತೆ ಕಾರ್ಯಾಚರಣೆ ಆರಂಭಿಸಿ ನಾಲ್ವರು ಮೃತದೇಹಗಳನ್ನು ಪತ್ತೆ ಹಚ್ಚಲಾಗಿತ್ತು. 9 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇದೀಗ, ದೆಹಲಿಯಿಂದ ಎರಡು ಪ್ರತ್ಯೇಕ ಇಂಡಿಗೋ ವಿಮಾನಗಳಲ್ಲಿ 4 ಮೃತದೇಹ ಬೆಂಗಳೂರಿಗೆ ಬಂದಿವೆ.
ಮೃತರನ್ನು ಪದ್ಮನಾಭ್, ಸಿಂಧೂ, ಸುಜಾತಾ, ವಿನಾಯಕ್ ಎಂದು ಗುರುತಿಸಲಾಗಿದೆ. ಈಗಾಗಲೇ ಮೂವರ ಮೃತದೇಹಗಳು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. ಮತ್ತೆರಡು ಮೃತದೇಹಗಳು ಮಧ್ಯಾಹ್ನ ಬರಲಿವೆ. ಪದ್ಮನಾಭ್ ಅವರ ಮೃತದೇಹವನ್ನು ಕುಂದಾಪುರಕ್ಕೆ ತೆಗೆದುಕೊಂಡು ಹೋಗಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.