ಜಿಲ್ಲೆಗೊಂದು ಟ್ರಾಮಾ ಸೆಂಟರ್: ಬಡರೋಗಿಗಳ ನೆರವಿಗೆ ಹಲವು ಯೋಜನೆ, ಶರಣಪ್ರಕಾಶ ಪಾಟೀಲ್ ಮಾಹಿತಿ

Sharanaprakash
Published on

ಬೆಂಗಳೂರು: ಪ್ರತಿ ಜಿಲ್ಲೆಯಲ್ಲೂ ಸರ್ಕಾರದ್ದೇ ಕ್ರಿಟಿಕಲ್ ಕೇರ್, ಟ್ರಾಮಾ ಸೆಂಟರ್ ಸ್ಥಾಪನೆಯಾಗಬೇಕೆಂಬ ಹಂಬಲ ಹೊಂದಿದ್ದು, ಮೊದಲ ಹಂತದಲ್ಲಿ ವಿಭಾಗವಾರು ಈ ಘಟಕಗಳನ್ನು ಆರಂಭಿಸಲು ಪ್ರಯತ್ನ ನಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ವಿಜಯವಾಣಿ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಈ ವಿಚಾರ ಹಂಚಿಕೊಂಡ ಅವರು, ಡಿವಿಜನಲ್ ಮಟ್ಟದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವ ಪ್ರಯತ್ನ ಸಾಗಿದೆ. ಎರಡನೇ ಹಂತದಲ್ಲಿ 2-3 ಜಿಲ್ಲೆಗೊಂದರಂತೆ ಆರಂಭಿಸಲಾಗುತ್ತದೆ. ಹೀಗೆ ಮಾಡದೇ ಇದ್ದರೆ ಕಾರ್ಪೆರೇಟ್​ನವರ ಆಸ್ಪತ್ರೆಗಳಲ್ಲಿ ಬಡವರಿಗೆ ಕಷ್ಟವಾಗಲಿದೆ. ಹೀಗಾಗಿ ಕ್ರಿಟಿಕಲ್ ಕೇರ್ ಘಟಕ, ಟ್ರಾಮಾ ಸೆಂಟರ್ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತಿದೆ. ಮುಂದಿನ ಹಂತದಲ್ಲಿ ಜಿಲ್ಲೆಗಳಲ್ಲೂ ಸ್ಥಾಪಿಸುವ ಗುರಿ ಇದೆ ಎಂದರು.

ಬಳ್ಳಾರಿ, ಕಲಬುರಗಿ, ಮೈಸೂರಲ್ಲಿ ಹೆಚ್ಚುವರಿಯಾಗಿ ಘಟಕ ತೆರೆಯುವ ಉದ್ದೇಶವಿದೆ. ಬೆಳಗಾವಿ, ಮೈಸೂರು, ಕಲಬುರಗಿಯಲ್ಲಿ ಸುಟ್ಟಗಾಯಗಳಿಗೆ ಚಿಕಿತ್ಸಾ ಘಟಕ ತೆರೆಯುವ ಉದ್ದೇಶವಿದೆ. ಹಾಗೆಯೇ ಕಲಬುರಗಿಯಲ್ಲಿ ತಾಯಿ ಮಗು ಆಸ್ಪತ್ರೆ ಆರಂಭಿಸಲಾಗುತ್ತಿದೆ. ಶಿವಮೊಗ್ಗ, ಮಂಡ್ಯದಲ್ಲೂ ಟ್ರಾಮಾ ಸೆಂಟರ್ ಕೆಲಸ ಆರಂಭವಾಗಲಿದೆ. ಬೀದರ್, ಗದಗದಲ್ಲಿ ಕ್ಯಾಥ್ ಲ್ಯಾಬ್ ಆರಂಭ ಮಾಡಲಾಗುತ್ತಿದೆ ಎಂದು ವಿವರಿಸಿದರು. ಕಾರವಾರದಲ್ಲಿ ನಾನೂರು ಬೆಡ್ ಆಸ್ಪತ್ರೆ ನಾಲ್ಕು ತಿಂಗಳಲ್ಲಿ ಆರಂಭ ಆಗಲಿದೆ. ಸದ್ಯ ಅಲ್ಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವ ಉದ್ದೇಶವಿದೆ. ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆ ಇದೆ ಎಂದು ಹೇಳಿದರು.

ಮೂರು ಹೊಸ ಕಾಲೇಜು: ರಾಜ್ಯದಲ್ಲಿ 22 ಸರ್ಕಾರಿ ಮೆಡಿಕಲ್ ಕಾಲೇಜುಗಳಿವೆ. ಇನ್ನೂ 8-9 ಕಡೆ ಸ್ಥಾಪನೆಯಾಗಬೇಕು. ಸಾರ್ವಜನಿಕ ಉದ್ದೇಶದಿಂದ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಇರಬೇಕೆಂಬುದು ನಮ್ಮ ಆಶಯ. ಬಡವರ ಮಕ್ಕಳೂ ಡಾಕ್ಟರ್ ಆಗಬೇಕು, ಇಲ್ಲಿ ಎಲ್ಲ ವಿಭಾಗಗಳು ಇರುವುದರಿಂದ ಬಡವರಿಗೆ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ. ಮುಂದಿನ ಸಾಲಿನಲ್ಲಿ ವಿಜಯನಗರ, ರಾಮನಗರ, ಕನಕಪುರದಲ್ಲಿ ಹೊಸ ಕಾಲೇಜು ಸ್ಥಾಪಿಸುವ ಇರಾದೆ ಇದೆ. ಬಜೆಟ್​ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶರಣ್ ಪ್ರಕಾಶ್ ಪಾಟೀಲ್ ವಿವರಿಸಿದರು. ಖಾಸಗಿಯವರು ಕಾಲೇಜಿಗೆ ದೊಡ್ಡ ಕಟ್ಟಡ ಕಟ್ಟಬಹುದು, ಆದರೆ ರೋಗಿಗಳು ಇರಲ್ಲ. ಸರ್ಕಾರಿ ಕಾಲೇಜಿನ ಆರಂಭದ ವರ್ಷಗಳಲ್ಲಿ ಸಣ್ಣಪುಟ್ಟ ತೊಂದರೆ ಆಗಬಹುದು, ನಂತರ ಗುಣಮಟ್ಟದ ಡಾಕ್ಟರ್ ಹೊರಬರುತ್ತಾರೆ ಎಂದರು.

ದರಕ್ಕೆ ಮಿತಿ: ಕೆಲವು ಖಾಸಗಿಯಲ್ಲಿ ಏನು ಆಗಬಾರದೋ ಅದು ಆಗುತ್ತಿದೆ, ಹಣ ಮಾಡುತ್ತಿದ್ದಾರೆ. ಚಿಕಿತ್ಸೆ ನೆಪದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಅನಗತ್ಯವಾಗಿ ಏನೂ ಮಾಡಲ್ಲ. ಅಲ್ಲದೇ ರೋಗಿಗಳ ಸಂಖ್ಯೆಯೂ ಹೆಚ್ಚಿರುತ್ತದೆ. ಖಾಸಗಿಯಲ್ಲಿ ಚಿಕಿತ್ಸೆಗೆ ರೇಟ್ ಕಾರ್ಡ್ ಪ್ರಕಟಿಸುವುದು ಹಾಗೂ ಪರಿಶೀಲನೆ ಮಾಡುವ ಅಗತ್ಯ ಇದೆ ಎಂದ ಅವರು ಆಂಬುಲೆನ್ಸ್ ದಂಧೆ ಗಮನಕ್ಕೆ ಬಂದಿದೆ. ತುರ್ತು ಚಿಕಿತ್ಸೆ ಇರುವ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೇ ಹೋಗಬೇಕೆಂದು ಸೂಚನೆ ಕೊಡಲಾಗಿದೆ. ಈ ಬಗ್ಗೆ ಗೈಡ್​ಲೈನ್ ಮಾಡಿದರೆ ಉಪಯೋಗ ಆಗಲ್ಲ, ಅನುಷ್ಠಾನ ಆಗಬೇಕು. ಹಾಗೆಯೇ, ಖಾಸಗಿ ಆಸ್ಪತ್ರೆ ಚಿಕಿತ್ಸಾ ದರಕ್ಕೊಂದು ಮಿತಿ ಹಾಕುವ ಯೋಚನೆ ಇದೆ ಎಂದರು.

ಕೇಂದ್ರದ ಪ್ರಸ್ತಾವನೆಗೆ ಆಕ್ಷೇಪ: ರಾಷ್ಟ್ರೀಯ ವೈದ್ಯಕೀಯ ಮಂಡಳಿ ಹೊಸದಾಗಿ ಮೆಡಿಕಲ್ ಕಾಲೇಜು ಆರಂಭಿಸಲು ರೂಪಿಸಿರುವ ನಿಯಮಕ್ಕೆ ರಾಜ್ಯ ಪೂರ್ಣ ಆಕ್ಷೇಪ ದಾಖಲಿಸಿದೆ. ಈ ನಿಯಮದ ಪ್ರಕಾರ ರಾಜ್ಯದಲ್ಲಿ ಇನ್ನು ಮುಂದೆ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅವಕಾಶ ಇಲ್ಲದಂತಾಗುತ್ತದೆ ಎಂದು ಹೇಳಿದರು.

ಕಡ್ಡಾಯ ಪೂರ್ಣ ತೆಗೆದಿಲ್ಲ: ರಾಜ್ಯದಲ್ಲಿ ವೈದ್ಯಕೋರ್ಸ್ ಪೂರ್ಣಗೊಳಿಸಿದವರ ಗ್ರಾಮೀಣ ಸೇವೆ ಕಡ್ಡಾಯ ಕಾನೂನು ಸಂಪೂರ್ಣ ತೆಗೆದು ಹಾಕಿಲ್ಲ. ಆದರೆ, ಸದ್ಯಕ್ಕೆ ಮಂಜೂರಾದ ಹುದ್ದೆಗಳಿಗೆ ಹೋಲಿಸಿದರೆ ವ್ಯಾಸಂಗ ಪೂರ್ಣಗೊಳಿಸಿದವರ ಸಂಖ್ಯೆ ದೊಡ್ಡದಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ. ಸರ್ಕಾರಕ್ಕೆ ಅಗತ್ಯ ಇರುವಷ್ಟು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ಇಟ್ಟುಕೊಳ್ಳಲಾಗಿದೆ ಎಂದರು.

ನಿಮ್ಹಾನ್ಸ್ ಘಟಕ

ಬೆಂಗಳೂರಲ್ಲಿ ನಿಮ್ಹಾನ್ಸ್​ನ ಹೆಚ್ಚುವರಿ ಘಟಕ ತೆರೆಯುವ ಪ್ರಯತ್ನ ಸಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಜಾಗ ಗುರುತಿಸಿ ಹಸ್ತಾಂತರ ಮಾಡಿದೆ. ಕೇಂದ್ರ ಸರ್ಕಾರ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ. ಶೀಘ್ರವೇ ಪ್ರಕ್ರಿಯೆ ನಡೆಯಲಿದ್ದು, ಸಭೆಗಳು ನಡೆದಿವೆ. ಜತೆಗೆ ಮೈಸೂರು, ಕಲಬುರಗಿಯಲ್ಲಿ ನಿಮ್ಹಾನ್ಸ್ ಕ್ಯಾಂಪಸ್ ಮಾಡಲಾಗುತ್ತದೆ ಎಂದರು.

ಕೋವಿಡ್ ತಯಾರಿ

ರಾಜ್ಯದಲ್ಲಿ ಕೋವಿಡ್ ಕೇಸ್ ಹೆಚ್ಚಿದೆ ನಿಜ. ಆದರೆ ಆತಂಕ ಬೇಡ. ಈಗ ಬಂದಿರುವುದು ಒಮಿಕ್ರಾನ್ ಉಪತಳಿಯಾಗಿದ್ದು, ವೇಗವಾಗಿ ಹರಡುತ್ತದೆ. ತೀವ್ರತೆ ಇಲ್ಲ. ಆದರೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಎಲ್ಲ ಆಸ್ಪತ್ರೆಗಳಲ್ಲಿ ಬೆಡ್, ಐಸಿಯು, ಔಷಧ, ಮ್ಯಾನ್ ಪವರ್ ತಯಾರಿ ಮಾಡಲಾಗಿದೆ. ತೀರಾ ಹತ್ತಿರದಿಂದ ಗಮನಿಸಲಾಗುತ್ತಿದೆ ಎಂದರು.

ಆಯುಷ್ಮಾನ್ ನಿಯಮ ಸಡಿಲಿಕೆ

ಆಯುಷ್ಮಾನ್ ಭಾರತ ಕರ್ನಾಟಕ ಯೋಜನೆಯ ನಿಯಮ ಸಡಿಲಿಸಿ, ತುರ್ತು ಚಿಕಿತ್ಸೆ ಅಗತ್ಯ ಇರುವಾಗ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲೂ ಸಹ ಚಿಕಿತ್ಸೆ ಪಡೆದುಕೊಳ್ಳುವ ಅನುಕೂಲತೆ ಮಾಡಿಕೊಡುವ ಆಶಯವಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net