

ಕೋಲ್ಕತ್ತ: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ನಿನ್ನೆ (ಏಪ್ರಿಲ್ 21) ನಡೆದ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಪಂದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ಈ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಕೆಕೆಆರ್ ರೋಚಕ ಗೆಲುವು ಸಾಧಿಸಿತು. ಆರ್‌ಸಿಬಿ ಕೇವಲ 1 ರನ್ ಅಂತರದಿಂದ ಹೀನಾಯು ಸೋಲನ್ನು ಅನುಭವಿಸಿತು. ಆದರೆ, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟ್ ಆದ ರೀತಿ ವಿವಾದವನ್ನು ಹುಟ್ಟು ಹಾಕಿತು. ಅದನ್ನು ಮೀರಿ ಮತ್ತೊಂದು ವಿವಾದ ಇದೀಗ ಹುಟ್ಟುಕೊಂಡಿದೆ. ಇದು ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಈ ಪಂದ್ಯದಲ್ಲಿ ಅಂಪೈರ್‌ಗಳು ಮಾಡಿದ ತಪ್ಪಿನಿಂದಾಗಿ ಕ್ರಿಕೆಟ್ ಜಗತ್ತೇ ಸದ್ಯ ತಲ್ಲಣಗೊಂಡಿದೆ. ಐಪಿಎಲ್ ಲೀಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಘೋರ ಪ್ರಮಾದ ನಡೆದಿದೆ. ಅಂಪೈರ್‌ಗಳು ಮಾಡಿದ ತಪ್ಪಿಗೆ ಆರ್‌ಸಿಬಿ ಬಲಿಯಾಗಿದೆ. ಈ ಸೀಸನ್ನಲ್ಲಿ ಪ್ಲೇ ಆಫ್ಗೆ ಏರುವ ಅವಕಾಶಗಳನ್ನು ಜೀವಂತವಾಗಿರಿಸಿಕೊಳ್ಳಲು, ಗೆಲ್ಲಲೇಬೇಕು ಎಂಬ ಗುರಿಯೊಂದಿಗೆ ನಿನ್ನೆ ಕೆಕೆಆರ್ ವಿರುದ್ಧ ಸೆಣಸಾಡಿದ ಆರ್‌ಸಿಬಿ, ಗೆಲುವಿಗೆ ಇನ್ನು ಒಂದು ಹೆಜ್ಜೆ ಬಾಕಿ ಇರುವಾಗ ಸೋಲನ್ನು ಅನುಭವಿಸಿತು.
ಈ ಪಂದ್ಯದಲ್ಲಿ ಆರ್‌ಸಿಬಿಗೆ ಕೊನೆಯ ಎಸೆತದಲ್ಲಿ ಮೂರು ರನ್‌ಗಳ ಅಗತ್ಯವಿತ್ತು. ಆದರೆ, ಕೇವಲ ಒಂದು ರನ್ ಗಳಿಸುವ ಮೂಲಕ 1 ರನ್ ಅಂತರದಲ್ಲಿ ಸೋಲುಂಡಿತು. ಆದರೆ, ಹೊಸದಾಗಿ ಬಹಿರಂಗಗೊಂಡ ಸಂಗತಿಯಲ್ಲಿ ಅಂಪೈರ್‌ಗಳು ಮಾಡಿದ ತಪ್ಪುಗಳಿಂದ ಆರ್‌ಸಿಬಿ ಈ ಪಂದ್ಯದಲ್ಲಿ ಎರಡು ರನ್‌ಗಳನ್ನು ಕಳೆದುಕೊಳ್ಳಬೇಕಾಯಿತು. ಆ ಎರಡು ರನ್‌ಗಳು ಆರ್‌ಸಿಬಿಗೆ ನ್ಯಾಯಯುತವಾಗಿ ಸಿಗಬೇಕಿತ್ತು. ಸಿಕ್ಕಿದ್ದರೆ, ಆರ್‌ಸಿಬಿ ಈ ಪಂದ್ಯವನ್ನು ಗೆಲ್ಲುತ್ತಿತ್ತು. ಈ ಸೀಸನ್ನಲ್ಲಿ ಪ್ಲೇ ಆಫ್ ರೇಸ್ಗೇರುವ ಆಸೆಯನ್ನು ಜೀವಂತವಾಗಿ ಇರಿಸಿಕೊಳ್ಳುತ್ತಿತ್ತು. ಆದರೆ, ಅಂಪೈರ್‌ಗಳು ಮಾಡಿದ ಘೋರ ತಪ್ಪಿನಿಂದಾಗಿ ಆರ್‌ಸಿಬಿ ಸೋತಿದ್ದಲ್ಲದೆ, ತೀವ್ರ ಟೀಕೆಗಳಿಗೂ ಗುರಿಯಾಗಿದೆ.
ಕೆಕೆಆರ್ ನೀಡಿದ 223 ರನ್‌ಗಳ ಗುರಿಯನ್ನು ಆರ್‌ಸಿಬಿ ಬೆನ್ನಟ್ಟಿತ್ತು. ಕೆಕೆಆರ್ ಬೌಲರ್ ವರುಣ್ ಚಕ್ರವರ್ತಿ ಅವರು ಎಸೆದ 17ನೇ ಓವರ್‌ನ ಐದನೇ ಎಸೆತವನ್ನು ಆರ್ಸಿಬಿಯ ಯುವ ಬ್ಯಾಟ್ಸ್ಮನ್ ಪ್ರಭುದೇಸಾಯಿ ಶಾರ್ಟ್ ಫೈನ್ ಲೆಗ್‌ನಲ್ಲಿ ಉತ್ತಮ ಶಾಟ್ ಆಡಿದರು. ಅಂಪೈರ್‌ಗಳು ಫೋರ್ ಎಂದು ಹೇಳಿದರು. ಆದರೆ, ವಾಸ್ತವವಾಗಿ ಅದು ಸಿಕ್ಸರ್ ಆಗಿತ್ತು. ಯಾವುದೇ ದೃಢೀಕರಣವಿಲ್ಲದೆ ಮತ್ತು ಪರಿಶೀಲಿಸದೆ ಫೋರ್ ಎಂದು ಘೋಷಿಸಲಾಯಿತು. ಅಲ್ಲಿಗೆ ಆರ್‌ಸಿಬಿ ಅಮೂಲ್ಯ ಎರಡು ರನ್‌ಗಳನ್ನು ಕಳೆದುಕೊಂಡಿತು. ಅಂತಿಮವಾಗಿ ಪಂದ್ಯದಲ್ಲಿ ಆರ್‌ಸಿಬಿ ಒಂದು ರನ್‌ನಿಂದ ಸೋತಿತು. ಆ ಎರಡು ರನ್‌ಗಳು ಆರ್‌ಸಿಬಿ ಸ್ಕೋರ್‌ಗೆ ಸೇರಿದ್ದರೆ, ಈ ಪಂದ್ಯವನ್ನು ಆರ್‌ಸಿಬಿ ಗೆಲ್ಲುತ್ತಿತ್ತು.
ತಮ್ಮ ಕೆಟ್ಟ ಅಂಪೈರಿಂಗ್‌ನಿಂದ ಆರ್‌ಸಿಬಿಗೆ ಹಾನಿ ಮಾಡುವುದಲ್ಲದೆ, ಐಪಿಎಲ್‌ಗೆ ಕೆಟ್ಟ ಹೆಸರು ತರಲು ಅಂಪೈರಿಂಗ್ ಮಾಡಲಾಗುತ್ತಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಅಂಪೈರ್ ರಿಚರ್ಡ್ ಕೆಟಲ್ಬರ್ಗ್ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಷ್ಟು ಸ್ಪಷ್ಟವಾಗಿ ಕಾಣುತ್ತಿರುವುದನ್ನು ಹೇಗೆ ಮಿಸ್ ಮಾಡಿದರು ಎಂದು ಅಂಪೈರ್ ತಪ್ಪನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ವಿಡಿಯೋ ಸಹ ಹಂಚಿಕೊಂಡಿದ್ದಾರೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ (ಏಪ್ರಿಲ್ 21) ಈಡನ್ ಗಾರ್ಡ್ನ್ಸ್ನಲ್ಲಿ ನಡೆದ ಐಪಿಎಲ್ 2024ರ 36 ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 1 ರನ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2024ರಲ್ಲಿ ಸೋಲಿನ ಕೂಪದಿಂದ ಎದ್ದುಬರಲು ಮತ್ತೊಮ್ಮೆ ವಿಫಲವಾಗಿದೆ. ಪ್ಲೇ ಆಫ್ ಹಂತ ತಲುಪುವ ಕನಸು ಬಹುತೇಕ ಅಂತ್ಯಗೊಂಡಂತಾಗಿದೆ. ಆಡಿದ 8 ಪಂದ್ಯಗಳಲ್ಲಿ 7 ಸೋಲು ಮತ್ತು 1 ಗೆಲುವು ಸಾಧಿಸಿದ್ದು, ಕೇವಲ 2 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.
ಆರ್‌ಸಿಬಿ ತಂಡದ ವಿಲ್ ಜಾಕ್ಸ್ ಹಾಗೂ ರಜತ್ ಪಾಟಿದಾರ್ ಅರ್ಧಶತಕದ ಕೊಡುಗೆ, ಸ್ಪಿನ್ ಬೌಲರ್ ಕರಣ್ ಶರ್ಮಾ ಮಿಂಚಿನ ಬ್ಯಾಟಿಂಗ್ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಕೇವಲ ಒಂದು ರನ್ ಅಂತರದಿಂದ ವಿರೋಚಿತ ಸೋಲು ಅನುಭವಿಸಿದೆ. ಕೆಕೆಆರ್ ನೀಡಿದ 223 ರನ್ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 221 ರನ್ ಗಳಿಸಿ ಆಲೌಟಾಯಿತು. (ಏಜೆನ್ಸೀಸ್)