

ಕೆ.ಆರ್.ಸಾಗರ: ಅಧಿಕಾರಿಗಳ ಎಚ್ಚರಿಕೆ ನಡುವೆಯೂ ಕೆ.ಆರ್.ಸಾಗರ ಹೋಬಳಿ ವ್ಯಾಪ್ತಿಯ ಗ್ರಾಮವೊಂದರಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ವಿವಾಹ ಮಾಡಲಾಗಿದೆ. ಅಂತೆಯೇ ಪರೀಕ್ಷೆ ಬರೆಯಲು ಹೋದಾಗ ಯಾರಿಗೂ ಗೊತ್ತಾಗಬಾರದೆಂದು ತಾಳಿ ಮತ್ತು ಕಾಲುಂಗುರ ಬಿಚ್ಚಿಸಿಕೊಂಡು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಇದೀಗ ಸತ್ಯಾಂಶ ಹೊರಬಂದ ಬೆನ್ನಲ್ಲೇ ಪಾಲಕರ ಐಡಿಯಾ ತಲೆಕೆಳಗಾಗಿದೆ.
ಅಪ್ರಾಪ್ತೆಗೆ ಕೆ.ಆರ್.ಪೇಟೆ ತಾಲೂಕಿನ ಯುವಕನಿಗೆ ಮದುವೆ ಮಾಡಿಕೊಡಲು ನಿಶ್ಚಯ ಮಾಡಲಾಗಿತ್ತು. ಈತ ಬಾಲಕಿಗೆ ದೂರದ ಸಂಬಂಧಿ ಎಂದು ತಿಳಿದುಬಂದಿದೆ. ಈ ನಡುವೆ ಬಾಲಕಿ ಶಾಲೆಗೆ ಹೋದಾಗ ತನ್ನ ಸ್ನೇಹಿತೆಯೊಂದಿಗೆ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದಾಳೆ. ನಂತರ ಶಿಕ್ಷಕಿಗೂ ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮಾ.18 ಮತ್ತು 25ರಂದು ಅಧಿಕಾರಿಗಳು ಬಾಲಕಿ ಮನೆಗೆ ಭೇಟಿ ನೀಡಿ ಬಾಲ್ಯವಿವಾಹ ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು. ಮದುವೆ ಮಾಡಲ್ಲ ಎಂದಿದ್ದ ಕುಟುಂಬಸ್ಥರು. ಮಾ.27ರಂದು ಬೆಳಗಿನ ಜಾವ ಮನೆಯಲ್ಲೇ ಕದ್ದುಮುಚ್ಚಿ ಮದುವೆ ಮಾಡಿ ಮುಗಿಸಿಬಿಟ್ಟಿದ್ದರು.
ಮಾ.28ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾದ ಹಿನ್ನೆಲೆ ಬಾಲಕಿಯ ತಾಳಿ ಮತ್ತು ಕಾಲುಂಗುರ ಬಿಚ್ಚಿಸಿಕೊಂಡು ಪರೀಕ್ಷೆ ಬರೆಯುವಂತೆ ಕಳುಹಿಸಿದ್ದರು. ಮೊದಲ ದಿನ ಮತ್ತು ಎರಡನೇ ದಿನದ ಪರೀಕ್ಷೆ ಬರೆದ ಬಳಿಕ, ಬಾಲಕಿಗೆ ಬಾಲ್ಯ ವಿವಾಹ ಆಗಿರುವ ವಿಷಯ ಬಹಿರಂಗಗೊಂಡಿದೆ. ವಿಷಯ ತಿಳಿದ ಅಧಿಕಾರಿಗಳು ಬಾಲಕಿಯನ್ನು ರಕ್ಷಣೆ ಮಾಡಿ ಜಿಲ್ಲಾ ಬಾಲಕಿಯರ ಬಾಲಮಂದಿರಕ್ಕೆ ಕಳುಹಿಸಿದ್ದಾರೆ. ಇತ್ತ ಬಾಲ್ಯವಿವಾಹ ಮಾಡಿದ್ದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.