ಹಿರಿಯ ನಟಿ ಜಯಂತಿ ನಿಧನಕ್ಕೆ ಸಿಎಂ ಬಿಎಸ್​ವೈ ಸೇರಿದಂತೆ ಗಣ್ಯರ ಸಂತಾಪ

jayanti
Published on

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, 'ಅಭಿನಯ ಶಾರದೆ' ಜಯಂತಿ(79) ಅವರು ಸೋಮವಾರ ಬೆಳಗ್ಗೆ ನಿಧನರಾದರು. ಈ ಸುದ್ದಿ ಸಿನಿಮಾರಂಗಕ್ಕೆ ಬರಸಿಡಿಲಿನಂತೆ ಬಡಿದಿದ್ದು, ಅನೇಕ ಗಣ್ಯರು ಮತ್ತು ಕಲಾವಿದರು ಸಂತಾಪ ಸೂಚಿಸಿದ್ದಾರೆ.

'ಪ್ರಖ್ಯಾತ ಹಿರಿಯ ಕಲಾವಿದೆ, ಅಭಿನಯ ಶಾರದೆ ಜಯಂತಿ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಕನ್ನಡ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬ, ಅಪಾರ ಅಭಿಮಾನಿ ಬಳಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್​ ಮೂಲಕ ಸಿಎಂ ಬಿ.ಎಸ್​.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

'ಹಿರಿಯ ನಟಿ, ಅಭಿನಯ ಶಾರದೆ ಶ್ರೀಮತಿ ಜಯಂತಿ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. 6 ಭಾಷೆಗಳ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಒನಕೆ ಓಬವ್ವ ರೀತಿಯ ಪೌರಾಣಿಕ ಪಾತ್ರ ಸೇರಿದಂತೆ ಅನೇಕ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಸಚಿವ ಡಾ.ಕೆ.ಸುಧಾಕರ್​ ಕಂಬನಿ ಮಿಡಿದಿದ್ದಾರೆ.

'ಅಭಿನಯ ಶಾರದೆ ಜಯಂತಿ ಅವರು ನಿಧನರಾದ ಸಂಗತಿ ಬೇಸರ ತರಿಸಿದೆ. ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿಯಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಅವರು ದಕ್ಷಿಣ ಭಾರತದ ಪ್ರಖ್ಯಾತ ನಟಿ ಎನಿಸಿಕೊಂಡಿದ್ದರು. ಅವರು ಕನ್ನಡಿಗರೆಂಬುದೇ ನಮ್ಮ ಹೆಮ್ಮೆ. ಅವರಿಗೆ ಸದ್ಗತಿ ದೊರೆಯಲಿ. ಕುಟುಂಬಕ್ಕೆ ನೋವು ಭರಿಸುವ ಶಕ್ತಿ‌ ಭಗವಂತ ನೀಡಲಿ' ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

'ಅಭಿಜಾತ ಪ್ರತಿಭೆಯ ಮೂಲಕ ದಶಕಗಳ ಕಾಲ ಚಿತ್ರಪ್ರೇಮಿಗಳ ಮನಗೆದ್ದಿದ್ದ ಮತ್ತು ನನ್ನ ಇಷ್ಟದ ನಟಿ ಅಭಿನಯ ಶಾರದೆ ಜಯಂತಿಯವರ ನಿಧನದಿಂದ ಅತೀವ ದುಃಖವಾಗಿದೆ. ಜಯಂತಿ ಅವರು ತಮ್ಮ ಚಿತ್ರಗಳ ಮೂಲಕ ಸದಾಕಾಲ ನಮ್ಮೆಲ್ಲರ ಮನದಲ್ಲಿ ಅಜರಾಮಾರರಾಗಿ ಇರುತ್ತಾರೆ. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

'ನನಗೆ ಈ ಸುದ್ದಿ ಕೇಳಿ ಶಾಕ್​ ಆಯ್ತು, ನಂಬೋದಿಕ್ಕೇ ಆಗುತ್ತಿಲ್ಲ' ಎನ್ನುತ್ತಲೇ ಹಿರಿಯ ನಟಿ ಮಾಲಾಶ್ರೀ ಭಾವುಕರಾದರು.

'ಅತ್ಯಂತ ಸ್ನೇಹಮಯಿಯಾಗಿದ್ದ ನಟಿ, ಎಂತಹ ಪಾತ್ರಕ್ಕೂ ಜೀವ ತುಂಬುತ್ತಿದ್ದರು, ಅವರು ಇನ್ನಿಲ್ಲ ಎಂಬ ಸುದ್ದಿ ಅತೀವ ನೋವು ತರಿಸಿದೆ' ಎಂದು ನೋವಿನಿಂದಲೇ ಹಿರಿಯ ನಟ ದೊಡ್ಡಣ್ಣ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net