ಮಳೆಗೆ ಕೊಚ್ಚಿಹೋದ ಗ್ರಾಮೀಣ ರಸ್ತೆ

Road Damaged due to Rain
Published on

ಸಿದ್ದಾಪುರ: ಹಲವು ದಿನಗಳಿಂದ ಸುರಿದ ಮಳೆಗೆ ಐದಕ್ಕೂ ಹೆಚ್ಚು ಗ್ರಾಮ ಹಾಗೂ ರೈತರ ತೋಟಗಳಿಗೆ ಸಂಪರ್ಕ ಕಲ್ಪಿಸುವ ತಾಲೂಕಿನ ಸಣ್ಣಗಮನಿ ಗ್ರಾಮೀಣ ರಸ್ತೆ ಕೊಚ್ಚಿ ಹೋಗಿದ್ದು ಸಂಚಾರ ಮಾಡುವುದು ದುಸ್ಥರವಾಗಿದೆ.

ತಾಲೂಕಿನ ತ್ಯಾರ್ಸಿಯಿಂದ ಪ್ರಾರಂಭವಾಗುವ ಈ ರಸ್ತೆ ಸಣ್ಣಗಮನಿ, ಕರಮನೆ, ಕಲ್ಲಾರೆಮನೆ, ಭಾನ್ಕುಳಿ, ವಾಜಗಾರ, ಹುಲಿಮನೆ, ಸಂಪೇಸರ ಹಾಗೂ ಬೇಡ್ಕಣಿಗೆ ಸಂಪರ್ಕ ಕಲ್ಪಿಸುವ ಲಿಂಕ್ ರಸ್ತೆಯಾಗಿದೆ.

ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಧರೆ ಕುಸಿದು ರಸ್ತೆ ಕೊಚ್ಚಿ ಹೋಗಿದೆ. ದ್ವಿಚಕ್ರ ವಾಹನ ಹೊರತುಪಡಿಸಿ ಬೇರೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

ಈ ರಸ್ತೆ ಬೇಡ್ಕಣಿ ಹಾಗೂ ಬಿದ್ರಕಾನ ಗ್ರಾಪಂ ವ್ಯಾಪ್ತಿಗೆ ಬರುತ್ತಿದ್ದು ಕುಸಿದ ರಸ್ತೆ ಬೇಡ್ಕಣಿ ಗ್ರಾಪಂಗೆ ಸೇರಿದ್ದಾಗಿದೆ. ಈ ಭಾಗದಲ್ಲಿ ತ್ಯಾರ್ಸಿ, ಕಡಕೇರಿ ಗ್ರಾಮದ ರೈತರ ತೋಟಗಳು ಸಹ ಬರುತ್ತಿರುವುದರಿಂದ ಅವರಿಗೆ ನಿತ್ಯ ತೋಟಕ್ಕೆ ಹೋಗಿ ಬರುವುದು ಕಷ್ಟವಾಗಿದೆ. ಜತೆಗೆ ಸಣ್ಣಗಮನಿ, ಭಾನ್ಕುಳಿ, ಕರಮನೆ, ಕಲ್ಲಾರಮನೆ, ವಾಜಗಾರಿಗೆ ಹೋಗುವ ಮಾರ್ಗ ಇದಾಗಿರುವುದರಿಂದ ರಸ್ತೆ ಸಂಪೂರ್ಣ ಕುಸಿದು ಹೋದರೆ ಈ ಭಾಗದ ಸಾರ್ವಜನಿಕರು, ರೈತರು,ಕೃಷಿ-ಕೂಲಿಕಾರರು, ವಿದ್ಯಾರ್ಥಿಗಳಿಗೆ ನಿತ್ಯ ಸಂಚಾರ ಮಾಡುವುದು ಕಷ್ವಾಗುವುದರಿಂದ ಸಂಬಂಧ ಪಟ್ಟ ಗ್ರಾಪಂ ಕೂಡಲೇ ಸಂಚಾರಕ್ಕೆ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈಗಾಗಲೇ ರಸ್ತೆ ಕುಸಿದಿರುವುದನ್ನು ಪರಿಶೀಲಿಸಿ ತಹಸೀಲ್ದಾರರಿಗೆ ಮಾಹಿತಿ ನೀಡಲಾಗಿದೆ. ಜಿಪಂ ಇಲಾಖೆ ರಸ್ತೆ ನಿರ್ವಹಣೆ ಮಾಡುತ್ತಿದ್ದು ಅವರಿಗೂ ಮಾಹಿತಿ ನೀಡಲಾಗುವುದು. | ಈರಣ್ಣ ಇಲಾಳ ಪಿಡಿಒ ಬೇಡ್ಕಣಿ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net