

ಟೊಕಿಯೊ: ಹೀಗೊಂದು ರೆಸ್ಟೋರೆಂಟ್ ಇರುತ್ತದೆ ಎಂದು ಊಹಿಸುವುದು ಕಷ್ಟಕರ. ಹೀಗೆಕೆ ಅಂತಿರಾ? ಈ ಸುದ್ದಿ ಓದಿ...
ಜಪಾನ್‌ನಲ್ಲಿರುವ ಈ ವಿಶಿಷ್ಟ ರೆಸ್ಟೋರೆಂಟ್ ನಿರಾಶಾವಾದಿಗಳಿಗೆ ಪ್ರತ್ಯೇಕವಾಗಿ ಸೇವೆ ಸಲ್ಲಿಸುತ್ತದೆ. ಈ ಉಪಾಹಾರ ಗೃಹವು ಜನರು ತಮ್ಮ ಹುಚ್ಚುತನವನ್ನು ಬಿಡುಗಡೆ ಮಾಡಲು ಅವಕಾಶ ಕಲ್ಪಿಸುತ್ತದೆ. ತಮ್ಮ ಜೀವನದಲ್ಲಿ ಸವಾಲಿನ ಹಂತಗಳನ್ನು ಎದುರಿಸುತ್ತಿರುವ ಅಥವಾ ನಿರಾಶಾವಾದಿ ಆಲೋಚನೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಈ ಹೋಟೆಲ್ ಸೂಕ್ತವೆಂದು ಪರಿಗಣಿಸಲಾಗಿದೆ.
ಟೋಕಿಯೊದಲ್ಲಿನ ಕೆಫೆಯು ನಿರಾಶಾವಾದಿಗಳು ಮತ್ತು ನಕಾರಾತ್ಮಕ ಮನಸ್ಥಿತಿ ಹೊಂದಿರುವ ಜನರಿಗೆ ಸೇವೆ ಸಲ್ಲಿಸಲು ಜನಪ್ರಿಯವಾಗಿದೆ.
ನೆಗೆಟಿವ್ ಕೆಫೆ ಮತ್ತು ಬಾರ್ ಮೋರಿ ಔಚಿ ರೆಸ್ಟೋರೆಂಟ್ ಟೋಕಿಯೊದ ಶಿಮೊಕಿಟಾಜಾವಾ ಪ್ರದೇಶದ ನೆರೆಹೊರೆಯಲ್ಲಿದೆ. ಕತ್ತಲೆಯಲ್ಲಿರುವ ಜನರಿಗೆ ಹಿತವಾದ ಸ್ಥಳವೆಂದು ಈ ರೆಸ್ಟೋರೆಂಟ್ ಅನ್ನು ಪ್ರಚಾರ ಮಾಡಲಾಗಿದೆ.
ಸ್ವತಃ ಖಿನ್ನತೆಯಿಂದ ಬಳಲುತ್ತಿರುವ ಕೆಫೆಯ ಮಾಲೀಕರು, ಒಂದು ದಶಕದ ಹಿಂದೆ ಸಮಾನ ಮನಸ್ಕರಿಗಾಗಿ ಇಂತಹ ರೆಸ್ಟೋರೆಂಟ್ ಸ್ಥಾಪಿಸುವ ಯೋಚನೆ ಮಾಡಿದರು. ತದನಂತರ 2020 ರಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ರೆಸ್ಟೋರೆಂಟ್ ತೆರೆಯಲು ನಿರ್ಧರಿಸಿದರು.
"ಜನರು ಯಾವಾಗಲೂ ಸಕಾರಾತ್ಮಕವಾಗಿರುವುದು ಒಳ್ಳೆಯದು ಮತ್ತು ನಕಾರಾತ್ಮಕವಾಗಿರುವುದು ಕೆಟ್ಟದು ಎಂದು ಹೇಳುತ್ತಾರೆ, ಆದರೆ, ಋಣಾತ್ಮಕ ಮನೋಭಾವವು ಅಂತಹ ಕೆಟ್ಟ ವಿಷಯ ಎಂದು ನಾನು ಭಾವಿಸುವುದಿಲ್ಲ" ಎಂದು ಕೆಫೆಯ ಮಾಲೀಕರು ಹೇಳುತ್ತಾರೆ. "ಬಹಳಷ್ಟು ನಕಾರಾತ್ಮಕ ಜನರು ತಮ್ಮ ವರ್ತನೆಯಲ್ಲಿ ರಿಸರ್ವ್ ಆಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ, ಇದು ದಯೆಯ ಒಂದು ರೂಪವಾಗಿದೆ, ಇಂತಹವರಿಗೆ ವಿಶ್ರಾಂತಿ ಸ್ಥಳವಿರುವುದು ಒಳ್ಳೆಯದು ಎಂದು ನಾನು ಭಾವಿಸಿದೆ" ಎಂದೂ ಅವರು ಹೇಳುತ್ತಾರೆ.
ಈ ಕೆಫೆಯು ಕಾಡುಪ್ರದೇಶದ ಅಲಂಕಾರಗಳು ಮತ್ತು ಖಾಸಗಿ ಕೊಠಡಿಗಳನ್ನು ಹೊಂದಿದೆ, ಇಲ್ಲಿ ಗ್ರಾಹಕರು ಸ್ವತಂತ್ರರಾಗಿರುತ್ತಾರೆ. ಯಾರ ಜತೆ ಇಲ್ಲದೆ ಒಬ್ಬಂಟಿ ಮಹಿಳೆಯರಿಗೆ ಮಾತ್ರ ಪ್ರವೇಶವಿರುವ ಸೌಲಭ್ಯವೂ ರೆಸ್ಟೋರೆಂಟ್ನಲ್ಲಿದೆ. ಅಲ್ಲದೆ, ಮಹಿಳೆಯರು ಜತೆಗಿದ್ದರೆ ಮಾತ್ರ ಪುರುಷರಿಗೆ ಪ್ರವೇಶವಕಾಶವಿದೆ.
ಈ ರೆಸ್ಟೋರೆಂಟ್ನಲ್ಲಿ ಹೊರಗಿನ ಆಹಾರವನ್ನೂ ತರಬಹುದು. ಆದರೆ, ಪ್ರತಿ ವ್ಯಕ್ತಿಗೆ ಕನಿಷ್ಠ ಒಂದು ಪಾನೀಯವನ್ನು ಆರ್ಡರ್ ಮಾಡಬೇಕು, ಇದರಲ್ಲಿಯೇ ಪ್ರವೇಶ ಶುಲ್ಕ ಪಡೆದುಕೊಳ್ಳಲಾಗುತ್ತದೆ.
ಕೆಫೆಯ ಬಗ್ಗೆ ಮತ್ತೊಂದು ಆಸಕ್ತಿದಾಯಕ ವಿಷಯವೆಂದರೆ ಅದರ ಕಾಕ್‌ಟೇಲ್‌ಗಳ ಮೆನು. ಇದು ವಿಲಕ್ಷಣವಾಗಿ ಉದ್ದವಾದ ಹೆಸರುಗಳನ್ನು ಹೊಂದಿದೆ.
ಇಲ್ಲಿ ಕೆಲವು ಕಾಕ್‌ಟೇಲ್‌ಗಳನ್ನು ಹೀಗೆ ಕರೆಯಲಾಗುತ್ತದೆ.
1) 'ನನ್ನ ಜನ್ಮದಿನದಂದು, ನನ್ನ ತಾಯಿ ನನಗೆ ಹಳ್ಳಿಗಾಡಿನಿಂದ ಕಲ್ಲಂಗಡಿಯನ್ನು ಕಳುಹಿಸಿದ್ದಾರೆ, ಮತ್ತು ನಾನು ಕಲ್ಲಂಗಡಿಯನ್ನು ನಿಜವಾಗಿಯೂ ಇಷ್ಟಪಡುವುದಿಲ್ಲ ಎಂದು ಅವಳಿಗೆ ಹೇಳಲು ನನಗೆ ಮನಸ್ಸು ಇರಲಿಲ್ಲ',
2) ' ನನ್ನ ತಂದೆಯ ಬಗ್ಗೆ ಇರುವ ಏಕೈಕ ಒಳ್ಳೆಯ ವಿಷಯವೆಂದರೆ ಅವರು ನಿಷ್ಠಾವಂತ ವ್ಯಕ್ತಿಯಾಗಿದ್ದರು, ಆದರೆ 22 ವರ್ಷಗಳ ಹಿಂದೆ ಅವರು ಇದ್ದಕ್ಕಿದ್ದಂತೆ ಕಣ್ಮರೆಯಾದರು, 'ಪೆಗಾಸಸ್' ನಿಜ' ಎಂದು ಬರೆದ ಪತ್ರವನ್ನು ಬಿಟ್ಟುಹೋಗಿದ್ದಾರೆ.
3)'ನಿನ್ನೆ, ನಾನು ಶಾಪಗ್ರಸ್ತ ಕೊಕೇಶಿ ಗೊಂಬೆಯನ್ನು ಮೌಂಟೇನ್ ಫಾರೆಸ್ಟ್‌ನಲ್ಲಿ ಆಳವಾಗಿ ಸಮಾಧಿ ಮಾಡಿದ್ದೇನೆ. ಆದರೆ ಇವತ್ತು ಬೆಳಗ್ಗೆ ಎದ್ದಾಗ ಅದು ನನ್ನ ಶೆಲ್ಫ್‌ನಲ್ಲಿ ಹಿಂತಿರುಗಿದೆ.'