ಭಾರತ ಒಲಿಂಪಿಕ್ಸ್​ ತಂಡಕ್ಕೆ ದಾಖಲೆಯ 50 ಕೋಟಿ ರೂ. ಪ್ರಾಯೋಜಕತ್ವ; ಟೋಕಿಯೊದಲ್ಲಿ ಕಂಡ ಯಶಸ್ಸಿನಿಂದ ಹೆಚ್ಚಿದ ಡಿಮ್ಯಾಂಡ್​

web oly
Published on

ನವದೆಹಲಿ: ಭಾರತದಲ್ಲಿ ಕ್ರಿಕೆಟ್​ ಹೊರತಾದ ಕ್ರೀಡೆಗಳಿಗೆ ಪ್ರಾಯೋಜಕರ ಬೆಂಬಲ ಲಭಿಸುವುದಿಲ್ಲ ಎಂಬ ವಾತಾವರಣ ಕೊನೆಗೂ ಬದಲಾವಣೆ ಕಂಡಿದೆ. ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾಗವಹಿಸಲಿರುವ ಭಾರತ ತಂಡಕ್ಕೆ 50 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಪ್ರಾಯೋಜಕತ್ವ ಲಭಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತದ ಕ್ರೀಡಾಪಟುಗಳು ಒಂದು ಚಿನ್ನ ಸಹಿತ 7 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿರುವುದು ಈ ಬಾರಿ ಪ್ರಾಯೋಜಕರ ಬೆಂಬಲ ಹೆಚ್ಚಲು ಕಾರಣವೆನಿಸಿದೆ.

ಕರೊನಾ ಭೀತಿಯ ನಡುವೆ ನಡೆದ ಟೋಕಿಯೊ ಒಲಿಂಪಿಕ್ಸ್​ ವೇಳೆ ಭಾರತ ತಂಡ ಸುಮಾರು 30 ಕೋಟಿ ರೂ. ಮೊತ್ತದ ಪ್ರಾಯೋಜಕತ್ವ ಪಡೆದಿತ್ತು. ಈ ಬಾರಿ ಇದು ಶೇ. 70ರಷ್ಟು ಏರಿಕೆಯಾಗಿದ್ದು, 50 ಕೋಟಿ ರೂ. ಮೊತ್ತವನ್ನು ದಾಟಿದೆ.

ಭಾರತೀಯ ಒಲಿಂಪಿಕ್ಸ್​ ಸಂಸ್ಥೆ (ಐಒಎ) ಇನ್ನೂ ಕೆಲ ಕಾಪೋರ್ರೇಟ್​ ಕಂಪನಿಗಳಿಂದ ಪ್ರಾಯೋಜಕತ್ವದ ಬೇಡಿಕೆಗಳನ್ನು ಪಡೆಯುತ್ತಿದ್ದು, ಈ ಮೊತ್ತ ಇನ್ನಷ್ಟು ಏರಿಕೆಯಾಗುವ ನಿರೀೆ ಇದೆ. ಇದುವರೆಗೆ 14 ಕಂಪನಿಗಳು ಭಾರತ ಒಲಿಂಪಿಕ್ಸ್​ ತಂಡದ ಪ್ರಾಯೋಜಕತ್ವ ಮತ್ತು ಸಹ&ಪ್ರಾಯೋಜಕತ್ವವನ್ನು ಪಡೆದುಕೊಂಡಿವೆ. ಇದರಲ್ಲಿ ರಿಲಯನ್ಸ್​ ೌಂಡೇಶನ್​, ಭಾರತ ಪೆಟ್ರೋಲಿಯಂ, ಅದಾನಿ ಗ್ರೂಪ್​, ಆದಿತ್ಯ ಬಿರ್ಲಾ ಕ್ಯಾಪಿಟಲ್​, ಯೆಸ್​ ಬ್ಯಾಂಕ್​, ಹರ್ಬಲ್​ಲೈಫ್​, ಬೋರೋಸಿಲ್​, ಅಮೂಲ್​, ಜೆಎಸ್​ಡಬ್ಲ್ಯು, ಪುಮಾ ಮುಂತಾದ ಕಂಪನಿಗಳು ಸೇರಿವೆ.

ಕ್ರಿಕೆಟ್​ ಹೊರತಾದ ಕ್ರೀಡೆಗಳ ಪ್ರಾಯೋಜಕತ್ವದತ್ತ ಕಾಪೋರ್ರೇಟ್​ ಕಂಪನಿಗಳು ಗಮನಹರಿಸುವಂತೆ ಮಾಡುವಲ್ಲಿ ಕೇಂದ್ರ ಸರ್ಕಾರದ ಪಾತ್ರವೂ ಇದೆ ಎನ್ನಲಾಗಿದೆ. ಹೀಗಾಗಿ ನೀರಜ್​ ಚೋಪ್ರಾ, ಪಿವಿ ಸಿಂಧು, ಮೀರಾಬಾಯಿ ಚಾನು, ಲವ್ಲಿನಾ ಬೋಗೋರ್ಹೈನ್​, ನಿಖತ್​ ಜರೀನ್​, ಚಿರಾಗ್​ ಶೆಟ್ಟಿ ಮುಂತಾದ ಕ್ರೀಡಾಪಟುಗಳು ಹೆಚ್ಚಿನ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವಂತಾಗಿದೆ.

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತದ ಸುಮಾರು 120 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ಪೈಕಿ ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ ಪ್ರಮುಖ ಆಕರ್ಷಣೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net