

ಬೆಳಗಾವಿ: ಡಿ.ಕೆ.ಶಿವಕುಮಾರ್ಗೆ ಡಿ. 14ರಂದು ಉತ್ತರ ಕೊಡುವೆ. ಅಂದು ನಮ್ಮಿಬ್ಬರ ನಡುವೆ ಓಪನ್ ವಾರ್ ಆಗಿಬಿಡಲಿ ಎಂದು ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ.
ಅಂದು ಒಂದು ತಾಸು ಬೇಕಾದರೂ ಪತ್ರಿಕಾಗೋಷ್ಠಿ ನಡೆಸಿ ಎಲ್ಲ ವಿವರ ಕೊಡುತ್ತೇನೆ. 1985ರಿಂದ ಹಿಡಿದು ಈವರೆಗೂ ನನ್ನ ವ್ಯಕ್ತಿತ್ವ ಹೇಗಿತ್ತು? ಅವರ ವ್ಯಕ್ತಿತ್ವ ಹೇಗಿತ್ತು? ನಮ್ಮ ಕುಟುಂಬ ಹೇಗಿತ್ತು? ಶಿವಕುಮಾರ್ ಕುಟುಂಬ ಯಾವ ರೀತಿಯಲ್ಲಿತ್ತು? ಎಂದು ಬಹಿರಂಗ ಪಡಿಸುವೆ. ಬ್ಲ್ಯಾಕ್ ಮೇಲ್ ಮಾಡುತ್ತಿರುವವರು ಯಾರು ಎನ್ನುವುದನ್ನ ಡಿ.14ರಂದು ತಿಳಿಸುತ್ತೇನೆ. ಅವರು ಶಾಸಕ ಸ್ಥಾನ ಉಳಿಸಿಕೊಳ್ಳಲು ಎಂದು ಬೆಳಗಾವಿಯಲ್ಲಿ ಬುಧವಾರ ರಮೇಶ್ ಜಾರಕಿಹೊಳಿ ಸವಾಲು ಹಾಕಿದರು.
ರಮೇಶ ಜಾರಕಿಹೊಳಿ ಬಿಜೆಪಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಅಂಥ ಕೊಳಕನ್ನು ಕಾಂಗ್ರೆಸ್ನಲ್ಲಿ ಒಂದು ಕ್ಷಣವೂ ಇಟ್ಟುಕೊಳ್ಳುತ್ತಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದರು. ಇದಕ್ಕೆ ಗರಂ ಆದ ರಮೇಶ್ ಜಾರಕಿಹೊಳಿ, ಡಿಕೆಶಿ ನನ್ನ ಕುರಿತು ಮಾಡಿರುವ ಆರೋಪಗಳಿಗೆ ಡಿ. 14ರಂದು ಚುನಾವಣಾ ಫಲಿತಾಂಶ ಬಂದ ದಿನ ಪ್ರತಿಕ್ರಿಯೆ ನೀಡುತ್ತೇನೆ. ಅತ್ಯಂತ ಕಠೋರವಾಗಿ ಉತ್ತರ ನೀಡುತ್ತೇನೆ. ಆ ದಿನ ಬೇಕಾದರೆ ನಮ್ಮಿಬ್ಬರ ನಡುವೆ ಯುದ್ಧವೇ ಆಗಿಬಿಡಲಿ. ಅಂದು ಡಿಕೆಶಿ ಇತಿಹಾಸ ಬಿಚ್ಚಿಡುವೆ ಎಂದರು.
ಬಿಜೆಪಿ, ಆರ್ಎಸ್ಎಸ್ ವರಿಷ್ಠರ ಆಶೀರ್ವಾದ ನನ್ನ ಮೇಲೆ ಇಲ್ಲದಿದ್ರೆ ಇಷ್ಟೊತ್ತಿಗೆ ಷಡ್ಯಂತ್ರ ಮಾಡಿ ನನ್ನನ್ನು ಅವರು ಮುಗಿಸಿ ಬಿಡ್ತಿದ್ರು ಎಂದ ರಮೇಶ್ ಜಾರಕಿಹೊಳಿ, ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಬಂದ ದಿನ ಡಿಕೆಶಿಯ ಎಲ್ಲ ಆರೋಪಗಳಿಗೆ ಉತ್ತರ ನೀಡುತ್ತೇನೆ. ವರಿಷ್ಠರ ಆಶೀರ್ವಾದ ನನ್ನ ಮೇಲೆ ಇದೆ. ಅದೇ ಕಾರಣಕ್ಕೆ ಇನ್ನೂ ಜೀವಂತ ಇದ್ದೇನೆ. ಪ್ರಮುಖ ನಾಯಕನಾಗಿ ಹೊರಹೊಮ್ಮಿದ್ದೇನೆ ಎಂದರು.
ಪ್ರಸ್ತುತ ವಿಧಾನ ಪರಿಷತ್ ಚುನಾವಣೆಯಲ್ಲಿ ಮೊದಲ ಪ್ರಾಶಸದ ಮತವನ್ನು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರವಾಗಿಯೇ ಕೇಳುತ್ತಿದ್ದೇವೆ. ಅದಕ್ಕಾಗಿ ಜಿಲ್ಲೆಯ ಮೂಲೆ&ಮೂಲೆಗೂ ಭೇಟಿ ನೀಡುತ್ತಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.