

ಬೆಂಗಳೂರು: ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತೆ ಕಿಡಿಕಾರಿದ್ದು, ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಿ, ಕಾಲಾವಕಾಶ ನೀಡಿ ಪೂರ್ಣಗೊಳಿಸುವ ಭರವಸೆ ನೀಡಬೇಕು ಎಂದು ಎಐಸಿಸಿ ವಕ್ತಾರ ಪವನ್ ಖೇರಾ ಆಗ್ರಹಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪವನ್ ಖೇರಾ, ಇಂಥಹದ್ದೊಂದು ಮಹತ್ವದ ಪ್ರಕರಣದ ತನಿಖೆ ವಿಚಾರದಲ್ಲಿ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಈಗಲಾದರೂ ಕೇಂದ್ರ ಸರ್ಕಾರ ಸೂಕ್ತ ತನಿಖೆಗೆ ಮುಂದಾಗಬೇಕು. ಹರಿತವಾಗಿ ಹಗರಣಕ್ಕೆ ಒಂದು ತಾರ್ಕಿಕ ಅಂತ್ಯ ನೀಡಬೇಕು ಎಂದು ಒತ್ತಾಯಿಸಿದರು.
ರಫೇಲ್ ಹಗರಣ ಕುರಿತು 2017ರಿಂದ ಗಮನ ಸೆಳೆಯುತ್ತಲೇ ಇದ್ದಾರೆ. ಈಗ ಫ್ರೆಂಚ್ ಮಾಧ್ಯಮದ ಮೂಲಕ ಹೊಸದೊಂದು ಮಾಹಿತಿ ಹೊರಬಿದ್ದಿದೆ. ಡಾ. ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ಅತ್ಯಂತ ವ್ಯವಸ್ಥಿತವಾಗಿ ರಫೇಲ್ ಖರೀದಿ ತಡೆದಿದ್ದರು. ಆದರೆ ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ತನ್ನ ಸ್ನೇಹಿತ ಉದ್ಯಮಿ ಅನಿಲ್ ಅಂಬಾನಿ ಜತೆ ತೆರಳಿ ಹೊಸ ಡೀಲ್ ಮಾಡಿಕೊಂಡು ವಾಪಾಸಾದರು. ಎಚ್ಎಎಲ್ ಇದ್ದ ಸ್ಥಾನಕ್ಕೆ ಅಂಬಾನಿ ಹೆಸರು ಸೇರ್ಪಡೆಯಾಯಿತು. ಬೆಲೆ ಸಹ ದೊಡ್ಡ ಮಟ್ಟದಲ್ಲಿ ಹೆಚ್ಚಳ ಆಯಿತು. ಅನುಮಾನ ಹೆಚ್ಚಾದಾಗ ರಾತ್ರೋರಾತ್ರಿ ತನಿಖೆ ನಡೆಸಬೇಕಿದ್ದ ಅಧಿಕಾರಿಯನ್ನು ಕೆಳಗಿಳಿಸಿ ತಮಗೆ ಬೇಕಿದ್ದ ಅಧಿಕಾರಿಯನ್ನು ಕೇಂದ್ರ ಸರ್ಕಾರ ನೇಮಿಸಿಕೊಂಡಿತು. ಇಂದಿಗೂ ಅದರ ತನಿಖೆಯ ಪ್ರಗತಿಯ ವಿವರ ಇಲ್ಲವಾಗಿದೆ ಎಂದು ಪವನ್ ಖೇರಾ ಆರೋಪಿಸಿದರು.
ರಫೇಲ್ ವಿಮಾನ ಖರೀದಿ ಹಗರಣ ಬಹಿರಂಗವಾಗಿದೆ. ಅತ್ಯಧಿಕ ಹಣ ನೀಡಿ ಕೇಂದ್ರ ಸರ್ಕಾರದಿಂದ ಖರೀದಿ ಆಗಿದೆ. ರಫೇಲ್ ಯುದ್ಧ ವಿಮಾನಗಳನ್ನ ಖರೀದಿಸಿದೆ. ಎಚ್ಎಎಲ್ ಗೆ ನೀಡಬೇಕಿದ್ದ ಟೆಂಡರ್ ಅನ್ನು ಬೇರೆಯವರಿಗೆ ಕೊಟ್ಟಿದ್ದರು. ಫ್ರೆಂಚ್ನ ದಸಾಲ್ಟ್ ಸಂಸ್ಥೆಗೆ ನೀಡಿದ್ದರು. 526 ಕೋಟಿ ನೀಡಿ ಯುದ್ಧ ವಿಮಾನಗಳ ಖರೀದಿಸಲಾಗಿದೆ. ದಸಾಲ್ಟ್ ಕಂಪನಿಯಲ್ಲಿ ಅಂಬಾನಿ ಷೇರಿದೆ. ಅಂಬಾನಿಯಿಂದಾಗಿಯೇ ಇದನ್ನ ನೀಡಲಾಗಿತ್ತು. ಟೆಂಡರ್ ವೇಳೆ ಅಕ್ರಮ ನಡೆದಿತ್ತು. ಹಗರಣದ ತನಿಖೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ನಿರ್ದೇಶನದಂತೆ ಕೇಸ್ ಸಿಬಿಐಗೆ ವರ್ಗಾಯಿಸಿದ್ದರು. ತನಿಖೆ ಕೈಗೆತ್ತಿಕೊಂಡ ವೇಳೆ ಅದರ ನಿರ್ದೇಶಕರ ಬದಲಾವಣೆಯಾಯ್ತು. ಬೇರೆ ಆರೋಪಗಳನ್ನ ಮಾಡಿ ಅಲೋಕ್ ವರ್ಮಾ ವರ್ಗಾಯಿಸಲಾಯ್ತು. ಹೀಗಾಗಿ ಈ ಹಗರಣ ನೆನೆಗುದಿಗೆ ಬಿದ್ದಿದೆ. ಕೇಂದ್ರ ಸರ್ಕಾರವೇ ಈ ಹಗರಣದ ಹಿಂದಿದೆ ಎಂದರು.
ರಪೇಲ್ ಖರೀದಿಯಲ್ಲಿ ಸುಶೇನ್ ಗುಪ್ತಾ ಮಧ್ಯವರ್ತಿ. ಇವನ ಮೇಲೆ ಹಲವು ಆರೋಪಗಳಿವೆ. ಇಂತಹವನು ವಿಮಾನ ಖರೀದಿಯಲ್ಲಿ ಮಧ್ಯವರ್ತಿಯಾಗಿದ್ದಾನೆ. 1.1 ಮಿಲಿಯನ್ ಯೂರೋ ಇದರಲ್ಲಿ ಕಿಕ್ ಬ್ಯಾಕ್ ಆಗಿದೆ. ಕೇಂದ್ರ ನಾಯಕರ ಮೇಲೆ ಕಿಕ್ ಬ್ಯಾಕ್ ಆರೋಪವಿದೆ. ಪ್ರಧಾನಿಯವರೇ ಇದಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.