

ಬೆಂಗಳೂರು: ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಡಾ.ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯ ವೈಖರಿಯನ್ನು ಟೀಕಿಸುವ ಭರದಲ್ಲಿ ಅಪ್ಪು ಸಾವಿನ ಬಗ್ಗೆ ಪ್ರಸ್ತಾಪಿಸಿಯಲ್ಲ ಎಂದು ಅಪ್ಪು ಅಭಿಮಾನಿಗಳು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೂಲಿಬೆಲೆ, ನಾನೂ ಅಪ್ಪು ಅಭಿಮಾನಿ. ಅವರ ಬಗ್ಗೆ ಅಪಾರ ಗೌರವಿದೆ. ನನ್ನ ಆ ಮಾತಿಂದ ನಿಮಗೆ ನೋವಾಗಿದ್ದರೆ ಕ್ಷಮೆ ಕೇಳುವೆ ಎಂದಿದ್ದಾರೆ.
'ಈ ಟ್ವೀಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಅಪ್ಪು ಬಗ್ಗೆ ನನಗೆ ಅಪಾರ ಗೌರವವಿದೆ. ದಯವಿಟ್ಟು ಈ ಟ್ವೀಟನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು' ಎಂದು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದಾರೆ.
ಏನಿದು ಪ್ರಕರಣ: 'ಸಿಎಂ ಕಾರ್ಯವೈಖರಿ ಬಗ್ಗೆ ಅವರ ಪಕ್ಷದ ಶಾಸಕರಿಂದಲೇ ಅಸಮಾಧನ ಇದೆ. ಫೈಲ್ಗಳಿಗೆ ಸಹಿ ಹಾಕಲು ಸಿಎಂಗೆ ಸಮಯ ಇರಲ್ಲ, ಆದರೆ ಇವರು ಯಾವಾಗಲೂ ಸಿನಿಮಾ ನೋಡಲು ಮಾತ್ರ ಹಾಜರಿರುತ್ತಾರೆ. ಚಿತ್ರನಟರೊಬ್ಬರು ನಿಧನರಾದಾಗ ಎಲ್ಲ ಕಾರ್ಯ ಮುಗಿಯುವರೆಗೂ 3 ದಿನಗಳ ಕಾಲ ಇದ್ದರು. ಇದೀಗ ವಿಕ್ರಾಂತ್ ರೋಣ ಮೂವಿ ನೋಡಿರಲೂಬಹುದು' ಎಂದು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದರು.
ಇದನ್ನು ನೋಡಿದ್ದ ಅಪ್ಪು ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಸಿಎಂ ಅವರನ್ನು ಟೀಕಿಸುವಾಗ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ರ ಹೆಸರನ್ನು ಪರೋಕ್ಷವಾಗಿ ತಂದಿದ್ದು ಸರಿಯಲ್ಲ ಎಂದಿದ್ದಾರೆ. ಕೆಲವರು ಕಾಲ್ ಮಾಡಿಯೂ ಪ್ರಶ್ನಿಸಿದ್ದಾರೆ.